ಹೊಸದಿಗಂತ ಶ್ರೀರಂಗಪಟ್ಟಣ:
ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣವು ಮಿನುಗುವ ದೀಪಗಳಿಂದ ಕಂಗೊಳಿಸಿತು. ಇಲ್ಲಿನ ಲಕ್ಷ ದೀಪೋತ್ಸವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 36ನೇ ವರ್ಷದ ಲಕ್ಷ ದೀಪೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.
ದೇವಾಲಯದ ಮುಂಭಾಗದಿಂದ ಗಂಡು ಭೇರುಂಡ ವೃತ್ತದವರೆಗಿನ ರಸ್ತೆಯುದ್ದಕ್ಕೂ ಸಾಲು ಸಾಲು ದೀಪಗಳು ಕಣ್ಮನ ತಣಿಸಿದವು. ಈ ಬಾರಿ ವಿಶೇಷವಾಗಿ ಬಿದಿರಿನ ದಬ್ಬೆಗಳ ಸಹಾಯದಿಂದ ರಸ್ತೆಯ ಮಧ್ಯಭಾಗದಲ್ಲಿ 10 ಸಾಲುಗಳು ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ತಲಾ 2 ಸಾಲುಗಳಂತೆ ವ್ಯವಸ್ಥಿತವಾಗಿ ದೀಪಗಳನ್ನು ಜೋಡಿಸಲಾಗಿತ್ತು. ಸಾವಿರಾರು ಎಣ್ಣೆ ಬತ್ತಿಗಳ ಬೆಳಕು ಇಡೀ ಪಟ್ಟಣಕ್ಕೆ ದೈವಿಕ ಮೆರುಗನ್ನು ನೀಡಿತ್ತು.
ಲಕ್ಷ ದೀಪೋತ್ಸವ ಸಮಿತಿಯ ಪ್ರಮುಖರಾದ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ಹಾಗೂ ಲಕ್ಷ್ಮೀಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ದೇವಾಲಯದ ಮುಂಭಾಗದಲ್ಲಿ ಶಾಸ್ತ್ರೋಕ್ತವಾಗಿ ಹೋಮ ಹವನಗಳನ್ನು ನೆರವೇರಿಸಿ, ಪೂಜೆ ಸಲ್ಲಿಸಿದ ನಂತರ ಗೋಧೂಳಿ ಲಗ್ನದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ದೀಪೋತ್ಸವದ ಸೌಂದರ್ಯವನ್ನು ಸವಿಯಲು ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಸಾವಿರಾರು ಪ್ರವಾಸಿಗರು ಹಾಗೂ ಭಕ್ತಾದಿಗಳು ಆಗಮಿಸಿ ಭಕ್ತಿ ಪರವಶರಾದರು.


