January15, 2026
Thursday, January 15, 2026
spot_img

ಭಕ್ತರ ಕಣ್ಮಣಿಗೆ ಕಣ್ಣೀರಿನ ವಿದಾಯ: ಪಂಚಭೂತಗಳಲ್ಲಿ ಸಿದ್ದರಾಮನಂದ ಶ್ರೀಗಳು ಐಕ್ಯ

ಹೊಸದಿಗಂತ ರಾಯಚೂರು:

ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್‌ನ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ (55) ಅವರು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹರಿದು ಬಂದ ಭಕ್ತಸಾಗರ ಹಾಗೂ ಗಣ್ಯರ ಸಮ್ಮುಖದಲ್ಲಿ ಶ್ರೀಗಳ ಅಂತ್ಯಕ್ರಿಯೆಯು ಹಾಲುಮತ ಸಮಾಜದ ಸಂಪ್ರದಾಯದಂತೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿತು.

ಕಳೆದ ಮೂರು ದಿನಗಳಿಂದ (ಜ.12 ರಿಂದ 14) ಮಠದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿದ್ದ ‘ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಗಳು, ಬುಧವಾರ ತಡರಾತ್ರಿಯವರೆಗೂ ಭಜನಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಗುರುವಾರ ಮುಂಜಾನೆ ಸುಮಾರು 4 ಗಂಟೆಗೆ ಅವರಿಗೆ ತೀವ್ರ ರಕ್ತದೊತ್ತಡದೊಂದಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಲಿಂಗಸುಗೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದರು.

ಶ್ರೀಗಳ ಪಾರ್ಥಿವ ಶರೀರದ ದರ್ಶನಕ್ಕೆ ಭಕ್ತರು ಮತ್ತು ರಾಜಕೀಯ ನಾಯಕರು ತಂಡೋಪತಂಡವಾಗಿ ಆಗಮಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಚಿವರುಗಳಾದ ಎನ್.ಎಸ್. ಬೋಸರಾಜು, ಭೈರತಿ ಸುರೇಶ, ಸಂಸದ ತುಕರಾಮ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಜಿಲ್ಲೆಯ ಬಹುತೇಕ ಶಾಸಕರು ಮತ್ತು ಮಾಜಿ ಶಾಸಕರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ತಿಂಥಣಿ ಬ್ರಿಜ್ ಕಾಗಿನೆಲೆ ಶಾಖಾಮಠದ ಆವರಣದಲ್ಲಿ ಮಂತ್ರಘೋಷಗಳೊಂದಿಗೆ ಸ್ವಾಮೀಜಿಯವರ ಅಂತ್ಯಕ್ರಿಯೆ ಜರುಗಿತು. ಜಿಲ್ಲಾಡಳಿತದ ಪರವಾಗಿ ಪೊಲೀಸ್ ಪಡೆಯು ಕುಶಾಲ ತೋಪುಗಳನ್ನು ಸಿಡಿಸುವ ಮೂಲಕ ಗೌರವ ವಂದನೆ ಸಲ್ಲಿಸಿತು. ಜಿಲ್ಲಾಧಿಕಾರಿ ನಿತೀಶ ಕೆ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರ ಮೇಲ್ವಿಚಾರಣೆಯಲ್ಲಿ ಭದ್ರತೆ ಹಾಗೂ ಭಕ್ತರ ದರ್ಶನಕ್ಕೆ ಸುಸೂತ್ರ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾಗಿನೆಲೆ ಪೀಠದ ಪ್ರಮುಖ ಶಾಖೆಗಳಲ್ಲಿ ಒಂದಾದ ತಿಂಥಣಿ ಮಠದ ಜವಾಬ್ದಾರಿ ಹೊತ್ತಿದ್ದ ಶ್ರೀಗಳು, ಆಧ್ಯಾತ್ಮಿಕ ಕ್ಷೇತ್ರದ ಜೊತೆಗೆ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ್ದರು. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಗಣನೀಯ ಕೊಡುಗೆಯನ್ನು ಭಕ್ತ ಸಮೂಹ ಸ್ಮರಿಸುತ್ತಿದೆ.

Must Read

error: Content is protected !!