January15, 2026
Thursday, January 15, 2026
spot_img

ಅಂಕೋಲಾದಲ್ಲಿ ‘ಖತರ್ನಾಕ್’ ಕಳ್ಳರ ಹಾವಳಿ: ಒಂದೇ ರಾತ್ರಿ ಮೂರು ಮನೆಗಳಿಗೆ ಕನ್ನ!

ಹೊಸದಿಗಂತ ಅಂಕೋಲಾ:

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಗ್ರಾಮಗಳಲ್ಲಿ ಈಗ ಕಳ್ಳರ ಭೀತಿ ಮನೆಮಾಡಿದೆ. ಅಗಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ರಾತ್ರಿ ಮೂರು ಮನೆಗಳ ಬೀಗ ಮುರಿದು ಕಳ್ಳತನ ನಡೆಸಿರುವ ಖದೀಮರು ಸಾರ್ವಜನಿಕರ ನಿದ್ದೆಗೆಡಿಸಿದ್ದಾರೆ.

ಅಗಸೂರಿನ ಸರಳೇಬೈಲ್‌ನಲ್ಲಿ ಇಬ್ಬರ ಮನೆ ಹಾಗೂ ಅಗಸೂರಿನ ಮತ್ತೊಂದು ಮನೆಯಲ್ಲಿ ಈ ಕೃತ್ಯ ನಡೆದಿದೆ. ಸರಳೇಬೈಲ್‌ನ ನಿವೃತ್ತ ನೌಕರರೊಬ್ಬರು ಮನೆಯಲ್ಲಿ ಇಲ್ಲದ ಸಮಯ ಸಾಧಿಸಿ ನುಗ್ಗಿದ ಕಳ್ಳರು, ಲ್ಯಾಪ್‌ಟಾಪ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ವಾಸವಿರುವ ವ್ಯಕ್ತಿಯೊಬ್ಬರ ಮನೆಗೂ ಕಳ್ಳರು ನುಗ್ಗಿದ್ದಾರಾದರೂ, ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಕಾರಣ ಬರಿಗೈಲಿ ಮರಳಿದ್ದಾರೆ ಎನ್ನಲಾಗಿದೆ.

ಇನ್ನು ಅಗಸೂರಿನ ಮತ್ತೊಂದು ಮನೆಯಲ್ಲೂ ಕಳ್ಳತನ ನಡೆದಿದ್ದು, ಅಲ್ಲಿನ ನಷ್ಟದ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕಳ್ಳರು ಹಗಲು ಹೊತ್ತಿನಲ್ಲೇ ಸಂಚು ನಡೆಸಿ, ಯಾರಿಲ್ಲದ ಮನೆಗಳನ್ನು ಗುರುತಿಸಿ ಕೃತ್ಯ ಎಸಗುತ್ತಿರುವುದು ಸ್ಪಷ್ಟವಾಗಿದೆ.

ಕೇವಲ ಮನೆಗಳಷ್ಟೇ ಅಲ್ಲದೆ, ಎರಡು ದಿನಗಳ ಹಿಂದೆಯಷ್ಟೇ ಸುಂಕಸಾಳದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ‘ಬ್ಯಾಂಕ್ ಆಫ್ ಬರೋಡಾ’ ಶಾಖೆಯ ಶೌಚಾಲಯದ ಗೋಡೆ ಒಡೆದು ಭದ್ರತಾ ಕೊಠಡಿ ಪ್ರವೇಶಿಸಲು ಕಳ್ಳರು ವಿಫಲ ಯತ್ನ ನಡೆಸಿದ್ದರು. ಈ ಬೆನ್ನಲ್ಲೇ ಸರಣಿ ಕಳ್ಳತನ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗೆ ತಾಲೂಕಿನಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ನೋಂದಣಿ ಸಂಖ್ಯೆ ಹೊಂದಿರುವ ಬೈಕ್‌ಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗಿದೆ. ವಿವಿಧ ವಸ್ತುಗಳ ಮಾರಾಟದ ನೆಪದಲ್ಲಿ ಬರುವ ಇವರು ಮನೆಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಸರಳೇಬೈಲ್ ಭಾಗದಲ್ಲಿ ಬೀದಿ ದೀಪಗಳು ಸಮರ್ಪಕವಾಗಿಲ್ಲದಿರುವುದು ಕಳ್ಳರಿಗೆ ವರದಾನವಾಗಿದೆ ಎಂದು ಸ್ಥಳೀಯರು ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಅಲೆಮಾರಿಗಳ ಮೇಲೆ ನಿಗಾ ಇಡಬೇಕು ಹಾಗೂ ರಾತ್ರಿ ಗಸ್ತನ್ನು ಚುರುಕುಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Must Read

error: Content is protected !!