ಹೊಸದಿಗಂತ ಮುಂಡಗೋಡ:
ತಾಯಿಯ ಎರಡನೇ ವಿವಾಹದಿಂದ ಅಸಮಾಧಾನಗೊಂಡಿದ್ದ ಮಗನೊಬ್ಬ, ತನ್ನ ಮಲತಂದೆಯ ಮೇಲೆ ಹರಿತವಾದ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ತಾಲೂಕಿನ ತಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಹಾನಗಲ್ ತಾಲೂಕಿನ ಮಹರಾಜಪೇಟಿ ಗ್ರಾಮದ ವಿಧವೆ ನಾಗವ್ವಾ ಕಲಕಟ್ಟಿ ಎಂಬುವವರನ್ನು ತಟ್ಟಿಹಳ್ಳಿಯ ಲಾರಿ ಚಾಲಕ ಶಿವಾನಂದ ರಾಮಣ್ಣಾ ಗುಡಿಯಾಳ (48) ಎರಡು ವರ್ಷಗಳ ಹಿಂದೆ ನೋಂದಾಯಿತ ವಿವಾಹವಾಗಿದ್ದರು. ಆದರೆ, ತಾಯಿಯ ಈ ಎರಡನೇ ಮದುವೆ ಮಗ ಶಿವರಾಜ ಕಲಕಟ್ಟಿಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ ಎನ್ನಲಾಗಿದೆ.

ಗಾಯಾಳು ಶಿವಾನಂದನಿಗೆ ಇದು ನಾಲ್ಕನೇ ಮದುವೆಯಾಗಿದ್ದು, ಆತ ಪಟ್ಟಣದಲ್ಲಿ ಮತ್ತೊಂದು ಸಂಬಂಧ ಹೊಂದಿದ್ದ ಎಂಬ ಆರೋಪವಿದೆ. ಇದೇ ವಿಚಾರವಾಗಿ ಪತ್ನಿ ನಾಗವ್ವಾ ಮೇಲೆ ಸಂಶಯ ವ್ಯಕ್ತಪಡಿಸಿ ಶಿವಾನಂದ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಬುಧವಾರ ರಾತ್ರಿಯೂ ದಂಪತಿಗಳ ನಡುವೆ ಜಗಳವಾಗಿದ್ದು, ಈ ವಿಷಯವನ್ನು ನಾಗವ್ವಾ ತನ್ನ ಮೊದಲ ಗಂಡನ ಮಗ ಶಿವರಾಜನಿಗೆ ತಿಳಿಸಿದ್ದಾಳೆ. ತಾಯಿಯ ಸಂಕಷ್ಟ ಕೇಳಿ ಆಕ್ರೋಶಗೊಂಡ ಶಿವರಾಜ, ಗುರುವಾರ ಹಾನಗಲ್‌ನಿಂದ ಕಾರಿನಲ್ಲಿ ತಟ್ಟಿಹಳ್ಳಿಗೆ ಬಂದು ಶಿವಾನಂದನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ.
ಗ್ರಾಮದ ಜನರೆಲ್ಲರೂ ಸಾಲಗಾಂವ ಜಾತ್ರೆಗೆ ತೆರಳಿದ್ದರಿಂದ ಗ್ರಾಮ ಬಿಕೋ ಎನ್ನುತ್ತಿತ್ತು. ಲಾರಿ ಮಾಲೀಕರು ಶಿವಾನಂದನ ಮನೆಗೆ ಹೋದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಗಾಯಾಳುವನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯ ಶಿವಾನಂದನ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ನಿ ನಾಗವ್ವಾ ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿ ಶಿವರಾಜ ಕಲಕಟ್ಟಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


