ಮುಖಕ್ಕೆ ಹೊಡೆಯೋದು, ಪರಚೋದು, ಸೋಫಾದಿಂದ ನೆಲಕ್ಕೆ ಹಾರೋದು, ಊಟ ಬಿಸಾಕೋದು, ಎದುರು ಮಾತಾಡೋದು.. ಇದೆಲ್ಲವೂ ಮೂರು ವರ್ಷದವರೆಗೆ ಕ್ಯೂಟ್ ಎನಿಸುತ್ತದೆ. ಆದರೆ ಮೂರು ವರ್ಷದ ನಂತರ ಇದೇ ವಿಷಯ ಕಿರಿಕಿರಿ ಮಾಡುತ್ತದೆ. ಜೆಂಟಲ್ ಪೇರೆಂಟಿಂಗ್ ಹೆಸರಿನಲ್ಲಿ ಪೋಷಕರು ಮಕ್ಕಳಿಗೆ ಬೈಯದೇ, ಹೊಡೆಯದೇ ಇರಬಹುದು. ಅದೇ ಮಕ್ಕಳು ಹತ್ತು ವರ್ಷದವರಾದ ನಂತರ ಇವೇ ಕೆಲಸಗಳನ್ನು ಮಾಡಿದರೆ ಎರಡು ಬಾರಿಸಬೇಕು ಎನಿಸುತ್ತದೆ. ಆದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೋದಿಲ್ಲ.
ಮಕ್ಕಳನ್ನು ಅತಿಯಾಗಿ ಹೊಡೆದು, ಬೈದು ಮಾಡದೆಯೂ, ಮೃದುವಾಗಿ ಬರೀ ಮುದ್ದು ಮಾಡುತ್ತಲೇ ಬುದ್ಧಿ ಹೇಳದೆಯೂ ಡಿಸಿಪ್ಲಿನ್ ಮಾಡಬಹುದು. ಈ ಮೂರು ವಿಧಾನ ಪಾಲಿಸಿ..
* ನಿಮ್ಮ ಪ್ರಕಾರ ಮಕ್ಕಳು ತಪ್ಪು ಕೆಲಸ ಮಾಡಿದರೆ ಆ ಕ್ಷಣವೇ ಮಗುವನ್ನು ಎತ್ತಿಕೊಂಡು ಹೋಗಿ ಒಂದು ರೂಮ್‌ನಲ್ಲಿಯೋ, ಮನೆಯ ಮೂಲೆಯಲ್ಲಿಯೋ ನಿಲ್ಲಿಸಿ. ಮಕ್ಕಳ ಸುತ್ತಮುತ್ತ ಯಾವುದೇ ಡಿಸ್ಟ್ರಾಕ್ಷನ್ ಇರದ ಜಾಗದಲ್ಲಿ ನಿಲ್ಲಿಸಿ. ನಿಮ್ಮ ಮಗು ಮೂರು ವರ್ಷದ್ದಾಗಿದ್ದರೆ ಮೂರು ನಿಮಿಷ, ಎರಡು ವರ್ಷದ್ದಾಗಿದ್ದರೆ ಎರಡು ನಿಮಿಷ ಒಬ್ಬರೇ ನಿಲ್ಲಲು ಬಿಡಿ. ನಾನೇನು ಮಾಡಿದೆ, ನನ್ನನ್ಯಾಕೆ ಇಲ್ಲಿ ನಿಲ್ಲಿಸಿದ್ದಾರೆ ಎಂದು ಅರಿವಾಗುತ್ತದೆ. ಆಗ ಮಾತನಾಡಿ.
* ಮೂಲೆಯಲ್ಲಿ ನಿಲ್ಲಿಸಿ ಅವರಿಗೆ ಕೊಟ್ಟ ಸಮಯವೂ ಮುಗಿದುಹೋಗಿದ್ರೆ ತಕ್ಷಣ ಅವರ ಬಳಿ ಹೋಗಿ, ಒಬ್ಬರೇ ಹೋಗಿ ಮಾತನಾಡಿ, ಯಾಕೆ ಹೀಗೆ ಮಾಡಿದೆ? ಹೀಗೆ ಮಾಡಿದ್ದಕ್ಕೆ ಏನಾಯ್ತು ಎಂದು ಪರಿಣಾಮದ ಬಗ್ಗೆ ಮಾತನಾಡಿ. ಮೃದುವಾದ ಮಾತಲ್ಲಿ ಅರ್ಥ ಮಾಡಿಸಿ. ಮನೆಯಲ್ಲಿ ಹಿರಿಯರು ಇದ್ದರೆ ಅವರು ಇದಕ್ಕೆ ಅಪೋಸ್ ಮಾಡುತ್ತಾರೆ. ಮಕ್ಕಳು ಮಾಡುತ್ತಾರೆ ಎಂದು ವಾದಿಸುತ್ತಾರೆ. ಆದರೆ ಇಡೀ ಮನೆ ಒಂದು ಟೀಂ ಆಗಿರುವುದು ಮುಖ್ಯ. ತಾಯಿ ಬೈದಾಗ ತಂದೆ ಏನಾಗಿಲ್ಲ ಹೋಗ್ಲಿ ಬಿಡು ಎಂದು ಸಮಾಧಾನ ಮಾಡಿದರೆ ತಂದೆ ಹೀರೋ ಆಗುತ್ತಾರೆ, ತಾಯಿ ವಿಲನ್!
* ಮಕ್ಕಳು ಬೇಡದ ಕೆಲಸ ಮಾಡುವಾಗ ಅವರನ್ನು ತಕ್ಷಣ ಸ್ಟಾಪ್ ಮಾಡಬೇಡಿ. ಅವರನ್ನು ನೋಡುವುದು ಅಥವಾ ಮಾತನಾಡುವುದನ್ನು ನಿಲ್ಲಿಸಿ. ಮಕ್ಕಳು ತಪ್ಪು ಕೆಲಸವನ್ನು ಸ್ಟಾಪ್ ಮಾಡಿದ ತಕ್ಷಣ ಅವರಿಗೆ ವೆರಿ ಗುಡ್ ಎನ್ನುವ ಪದಗಳ ಮೂಲಕ ನೀನೀಗ ಮಾಡಿದ್ದು ಸರಿ ಎಂದು ಹೇಳಿಕೊಡಿ.


