ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳಿಂದ ಸ್ವಲ್ಪ ಸುಧಾರಣೆ ಕಂಡಿದ್ದ ಬೆಂಗಳೂರಿನ ಗಾಳಿಯ ಗುಣಮಟ್ಟ ಇದೀಗ ಮತ್ತೆ ಆತಂಕ ಹುಟ್ಟಿಸುವ ಮಟ್ಟಕ್ಕೆ ಕುಸಿದಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) ಅಂಕಿಅಂಶಗಳು ನಗರದ ಗಾಳಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಇರುವುದನ್ನು ತೋರಿಸುತ್ತಿವೆ.
ಇಂದು ಬೆಂಗಳೂರಿನ ಏರ್ ಕ್ವಾಲಿಟಿ ಸೂಚ್ಯಂಕ 170 ದಾಖಲಾಗಿದ್ದು, ಡಿಸೆಂಬರ್ ತಿಂಗಳಿಗಿಂತ ಸ್ವಲ್ಪ ಉತ್ತಮವೆನಿಸಿದರೂ ಸಂಪೂರ್ಣವಾಗಿ ಸುರಕ್ಷಿತ ಹಂತ ತಲುಪಿಲ್ಲ. ಕಳೆದ ತಿಂಗಳು ಕೆಲವು ಸಂದರ್ಭಗಳಲ್ಲಿ AQI 200 ಗಡಿ ದಾಟಿದ್ದರಿಂದ ನಗರವಾಸಿಗಳಲ್ಲಿ ಭಾರೀ ಆತಂಕ ಮೂಡಿತ್ತು. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಳಪೆ ಮಟ್ಟ ತಲುಪಿದ್ದ ವರದಿಗಳು ಬಂದಿದ್ದವು.
ಇಂದಿನ ಅಂಕಿಅಂಶಗಳ ಪ್ರಕಾರ PM2.5 ಮಟ್ಟ 82 ಮತ್ತು PM10 ಮಟ್ಟ 108 ಆಗಿದೆ. ಈ ಅತಿ ಸೂಕ್ಷ್ಮ ಧೂಳಿನ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶ ಹಾಗೂ ರಕ್ತ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶ್ವಾಸಕೋಶ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಜ್ಯದ ಇತರ ನಗರಗಳಲ್ಲಿಯೂ ಗಾಳಿಯ ಗುಣಮಟ್ಟ ಸಮಾಧಾನಕರವಾಗಿಲ್ಲ. ಮಂಗಳೂರು, ಬಳ್ಳಾರಿ, ಉಡುಪಿ ಸೇರಿದಂತೆ ಕೆಲವು ನಗರಗಳಲ್ಲಿ AQI ಅನಾರೋಗ್ಯಕರ ಹಂತಕ್ಕೆ ತಲುಪಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬೆಂಗಳೂರು ದೆಹಲಿಯಂತೆಯೇ ತೀವ್ರ ವಾಯುಮಾಲಿನ್ಯ ಸಮಸ್ಯೆ ಎದುರಿಸಬಹುದು ಎಂಬ ಎಚ್ಚರಿಕೆಯೂ ವ್ಯಕ್ತವಾಗಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.


