ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ನಡೆದಿದ್ದ ಒಪ್ಪಂದವೊಂದು ಕೆಲವೇ ದಿನಗಳಲ್ಲಿ ದೊಡ್ಡ ವಿವಾದಕ್ಕೆ ತಿರುಗಿದೆ. ಅಬುಧಾಬಿಯಲ್ಲಿ ನಡೆದ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ₹9.20 ಕೋಟಿಗೆ ಖರೀದಿಸಿತ್ತು. ಆದರೆ ಈ ನಿರ್ಧಾರ ಇದೀಗ ಕೆಕೆಆರ್‌ಗೆ ತಲೆನೋವಾಗಿ ಪರಿಣಮಿಸಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅಶಾಂತಿ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿಗಳ ಹಿನ್ನೆಲೆ, ಮುಸ್ತಾಫಿಜುರ್ ಆಯ್ಕೆ ವಿರುದ್ಧ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಕೆಲ ಸಂಘಟನೆಗಳು ಕೆಕೆಆರ್ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದವು. ಈ ಬೆಳವಣಿಗೆಯ ನಡುವೆ ಬಿಸಿಸಿಐ ಹಸ್ತಕ್ಷೇಪ ಮಾಡಿದ್ದು, ಮುಸ್ತಾಫಿಜುರ್ ಅವರನ್ನು ತಂಡದಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ, ಐಪಿಎಲ್ 2026ರಿಂದ ಹೊರಗುಳಿಯಬೇಕಾದ ಸ್ಥಿತಿಗೆ ಮುಸ್ತಾಫಿಜುರ್ ತಲುಪಿದ್ದಾರೆ.
ಈ ವಿಷಯ ಭಾರತ–ಬಾಂಗ್ಲಾದೇಶ ಕ್ರಿಕೆಟ್ ಸಂಬಂಧಗಳ ಮೇಲೂ ಚರ್ಚೆಗೆ ಕಾರಣವಾಗಿದೆ. ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘದ ಅಧ್ಯಕ್ಷ ಮೊಹಮ್ಮದ್ ಮಿಥುನ್ ಮಾತನಾಡಿ, ಒಪ್ಪಂದ ರದ್ದತಿ ವಿರುದ್ಧ ಕಾನೂನು ಅಥವಾ ಆಡಳಿತಾತ್ಮಕ ಹೋರಾಟದ ಬಗ್ಗೆ ಯೋಚಿಸಲಾಗಿತ್ತು ಎಂದು ತಿಳಿಸಿದ್ದಾರೆ. ವಿಶ್ವ ಕ್ರಿಕೆಟಿಗರ ಸಂಘವೂ ಬೆಂಬಲ ನೀಡಲು ಸಿದ್ಧವಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಮುಸ್ತಾಫಿಜುರ್ ಅವರೇ ಈ ವಿಚಾರವನ್ನು ಮುಂದುವರಿಸಬೇಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಹೋರಾಟ ಕೈಬಿಡಲಾಯಿತು ಎಂದು ಸ್ಪಷ್ಟಪಡಿಸಿದರು.
ಇದೀಗ ಮತ್ತೊಂದು ಪ್ರಶ್ನೆ ಚರ್ಚೆಯಲ್ಲಿದೆ. ಮುಸ್ತಾಫಿಜುರ್‌ಗೆ ನೀಡಿದ್ದ ₹9.20 ಕೋಟಿ ಹಣದ ಭವಿಷ್ಯ ಏನು? ಐಪಿಎಲ್ ನಿಯಮಗಳ ಪ್ರಕಾರ, ಫ್ರಾಂಚೈಸಿಯೇ ಒಪ್ಪಂದ ರದ್ದು ಮಾಡಿದರೆ ಪರಿಹಾರಕ್ಕೆ ಅವಕಾಶವಿದೆ. ಆದರೆ ಈ ಕುರಿತು ಬಿಸಿಸಿಐ ಅಥವಾ ಕೆಕೆಆರ್ ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ.


