ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸತತ ಐದು ದಿನವೂ ಟ್ರ್ಯಾಕ್ ಓಟದಲ್ಲಿ ಪಾರಮ್ಯ ಮೆರೆದ ಮದ್ರಾಸ್ ವಿಶ್ವವಿದ್ಯಾಲಯವು 134 ಅಂಕಗಳೊoದಿಗೆ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಟ್ರೋಫಿಯನ್ನು ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಎತ್ತಿ ಹಿಡಿಯಿತು. ಸ್ಥಳೀಯ ಮಂಗಳೂರು ವಿಶ್ವವಿದ್ಯಾಲಯವು ಎರಡು ವಿಭಾಗದಲ್ಲಿ 109 ಅಂಕಗಳೊoದಿಗೆ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ಪುರುಷರ ವಿಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾಲಯ(74), ಮಂಗಳೂರು (60), ರೋಹ್ತಕ್ ಎಂಡಿಯು ವಿಶ್ವವಿದ್ಯಾಲಯ (29) ಹಾಗೂ ಮಹಿಳೆಯರ ವಿಭಾಗದಲ್ಲಿ ಚಂಡೀಗಢ ವಿಶ್ವವಿದ್ಯಾಲಯ (67), ಮದ್ರಾಸ್ ವಿಶ್ವವಿದ್ಯಾಲಯ (47) ಮತ್ತು ಮಂಗಳೂರು ವಿಶ್ವವಿದ್ಯಾಲಯ (38) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವು.
ಕ್ರೀಡಾಕೂಟದ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಯನ್ನು ಮಹಿಳಾ ವಿಭಾಗದಲ್ಲಿ ಲವ್ಲೀ ಪ್ರೊಫೆಷನಲ್ ವಿಶ್ವವಿದ್ಯಾಲಯದ ಪೂಜಾ (ಹೈಜಂಪ್) ಹಾಗೂ ಪುರುಷರ ವಿಭಾಗದಲ್ಲಿ ಚೆನೈ ಮದ್ರಾಸ್ ವಿಶ್ವವಿದ್ಯಾಲಯದ ಮೋಹನ್ ರಾಜ್ (ಟ್ರಿಪಲ್ ಜಂಪ್) ಮತ್ತು ಪಂಜಾಬ್ ಆರ್‌ಐಎಂಟಿ ವಿಶ್ವವಿದ್ಯಾಲಯದ ವಿಹ್ವೇಂದ್ರ ಸಿಂಗ್ (20 ಕಿ.ಮೀ. ನಡಿಗೆ) ಪಡೆದರು.

ಕೂಟ ದಾಖಲೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಕ್ರೀಡಾಕೂಟದಲ್ಲಿ ಐದು ನೂತನ ಕೂಟ ದಾಖಲೆಗಳಾಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 25,000 ರೂಪಾಯಿ ನಗದು ಬಹುಮಾನ ನೀಡಲಾಯಿತು. 4*400 ಮೀಟರ್ಸ್ ಓಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡ, 100 ಮೀ. ಓಟದಲ್ಲಿ ಸ್ಯಾಮ್ ವಸಂತ್ (ಕೊಯಂಮುತ್ತೂರು ಭಾರತೀಯರ್ ವಿ.ವಿ.), ಪೋಲ್‌ವಾಲ್ಟ್ನಲ್ಲಿ ಕುಲ್ದೀಪ್ ಯಾದವ್ (ಗ್ವಾಲಿಯರ್ ಐಟಿಎಂ ವಿ.ವಿ.), ಹೈಜಂಪ್‌ನಲ್ಲಿ ಪೂಜಾ (ಲವ್ಲೀ ಪ್ರೊಫೆಷನ್ ವಿ.ವಿ.) ಹಾಗೂ ಹ್ಯಾಮರ್ ಥ್ರೋ ತಾನ್ಯಾ ಚೌಧರಿ (ಚಂಡೀಗಢ ವಿ.ವಿ.) ದಾಖಲೆ ಬರೆದರು.
ಅಂತಿಮ ದಿನ
ಕ್ರೀಡಾಕೂಟದ ಅಂತಿಮ ದಿನವಾದ ಶುಕ್ರವಾರ ಮೂರು ಕೂಟ ದಾಖಲೆಗಳಿಗೆ ಸಾಕ್ಷಿಯಾಯಿತು. ಕ್ರೀಡಾಕೂಟದ ಗಮನ ಸೆಳೆದಿದ್ದ 4*400 ಮೀಟರ್ಸ್ ರಿಲೇಯಲ್ಲಿ ನೂತನ ಕೂಟ ದಾಖಲೆ (3:08.45ನಿ.) ಜೊತೆ ಚಿನ್ನ ಗೆದ್ದ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿಗಳಾದ ಸಾಕೇತ್, ಕೇಶವನ್, ಪ್ರಥಮೇಶ್ ಹಾಗೂ ಆಕಾಶ್ ರಾಜ್ ಗೆಲುವಿನ ನಗೆ ಬೀರಿದರು. ಸಾಕೇತ್ ಆರಂಭದಲ್ಲಿ ಉತ್ತಮ ಮುನ್ನಡೆ ನೀಡಿದರೆ, ಕೇಶವನ್ ಅಂತರ ಕಾಯ್ದುಕೊಂಡರು, ಪ್ರಥಮೇಶ್ ವೇಗ ನೀಡಿದರೆ, ಆಕಾಶ್ ರಾಜ್ ಯಶಸ್ವಿಯಾಗಿ ಗುರಿ ತಲುಪಿಸಿದರು.
‘ಆಳ್ವಾಸ್‌ನಲ್ಲಿ ನಮಗೆ ದೊರೆತ ತರಬೇತಿ, ಪ್ರೋತ್ಸಾಹವೇ ಯಶಸ್ಸಿನ ಗುಟ್ಟು’ ಎಂದು ನಾಲ್ವರೂ ವಿಜಯದ ಸಂಕೇತ ಸೂಚಿಸಿದರು.


