ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಮುಂದುವರಿದಿದ್ದು, ಈ ನಿಟ್ಟಿನಲ್ಲಿ ಒಂದೇ ದಿನ 242 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್ಸೈಟ್ಗಳ ಲಿಂಕ್ಗಳನ್ನು ಬ್ಲಾಕ್ ಮಾಡಿದೆ.
ಕಳೆದ ಕೆಲ ತಿಂಗಳಲ್ಲಿ ಸಾವಿರಾರು ಅಕ್ರಮ ಬೆಟ್ಟಿಂಗ್ ವೆಬ್ಸೈಟ್ಗಳನ್ನು ಸರ್ಕಾರ ನಿರ್ಬಂಧಿಸಿಸಲಾಗಿದೆ.
2025ರ ಆಗಸ್ಟ್ ತಿಂಗಳಲ್ಲಿ ಆನ್ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದಿತು. ಆಗಿನಿಂದ ಇಲ್ಲಿಯವರೆಗೆ 7,800ಕ್ಕೂ ಅಧಿಕ ಅಕ್ರಮ ಬೆಟ್ಟಿಂಗ್ ಮತ್ತು ಜೂಜು (ಗ್ಯಾಂಬ್ಲಿಂಗ್) ಜಾಲತಾಣಗಳ ಲಿಂಕ್ಗಳನ್ನು ಬ್ಲಾಕ್ ಮಾಡಲಾಗಿದೆ.
ಕಾಯ್ದೆ ಜಾರಿಯಾಗುವ ಮುನ್ನ, 2022ರಿಂದ 2025ರ ಜೂನ್ವರೆಗೆ ಐಟಿ ಕಾಯ್ದೆಯ ಸೆಕ್ಷನ್ 69ಎ ಬಳಸಿ 1,524 ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್ಸೈಟ್ಗಳು ಹಾಗೂ ಮೊಬೈಲ್ ಆ್ಯಪ್ಗಳನ್ನು ಸರ್ಕಾರ ಬ್ಲಾಕ್ ಮಾಡಿತ್ತು.
ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ನಿಂದ ಯುವಜನರು ಅತಿಹೆಚ್ಚು ಹಾನಿಗೊಳಗಾಗುತ್ತಿದ್ದಾರೆ. ಬಹಳ ಜನರು ಸಾಕಷ್ಟು ಹಣ ಕಳೆದುಕೊಂಡು ತಮ್ಮ ಜೊತೆ ಕುಟುಂಬವನ್ನೂ ಬೀದಿಗೆ ಬೀಳುವಂತೆ ಮಾಡುತ್ತಿದ್ದಾರೆ. ಅಕ್ರಮವಾಗಿ ನಡೆಯುವ ಈ ಆನ್ಲೈನ್ ಬೆಟ್ಟಿಂಗ್ ಪ್ಲಾಟ್ಫಾರ್ಮ್ಗಳಿಗೆ ಕಡಿವಾಣ ಹಾಕಿ ಜನರನ್ನು ರಕ್ಷಿಸಲು ಸರ್ಕಾರ ಪಣತೊಟ್ಟು ಕೆಲಸ ಮಾಡುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿದ್ದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.


