ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:
ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ತುರ್ತು ಮಧ್ಯಪ್ರವೇಶವನ್ನು ಕೋರಿ ಪತ್ರ ಬರೆದಿದ್ದಾರೆ.
ಕರ್ತವ್ಯ ನಿರತ ಮಹಿಳಾ ಅಧಿಕಾರಿಗೆ ಬೆದರಿಕೆ ಮತ್ತು ದೌರ್ಜನ್ಯ ಎಸಗುವುದು ಸಾರ್ವಜನಿಕ ಸೇವೆಯ ಘನತೆ, ಆಡಳಿತ ಶಿಸ್ತು ಮತ್ತು ಕಾನೂನು ಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ದುಷ್ಕೃತ್ಯಗಳು ಪ್ರಾಮಾಣಿಕ ಅಧಿಕಾರಿಗಳ ಮನೋಬಲವನ್ನು ಕುಗ್ಗಿಸುವುದರ ಜೊತೆಗೆ ಆಡಳಿತ ವ್ಯವಸ್ಥೆಗೆ ಧಕ್ಕೆ ತರುತ್ತವೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಳ್ಳಲು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಹಾಗೂ ಮಹಿಳಾ ಅಧಿಕಾರಿಗಳನ್ನು ರಾಜಕೀಯ ಹಸ್ತಕ್ಷೇಪ ಮತ್ತು ಒತ್ತಡಗಳಿಂದ ರಕ್ಷಿಸುವಂತೆ ಅಗತ್ಯ ನಿರ್ದೇಶನ ನೀಡಲು ರಾಷ್ಟ್ರೀಯ ಮಹಿಳಾ ಆಯೋಗವನ್ನು ಡಾ. ಸುಧಾಕರ್ ಅವರು ಒತ್ತಾಯಿಸಿದ್ದಾರೆ.


