ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ಸರ್ಕಾರದ ವಿರುದ್ಧ ಸಮರಕ್ಕೆ ರೆಡ್ಡಿ ಮತ್ತು ಶ್ರೀರಾಮುಲು ಸಜ್ಜಾಗಿದ್ದಾರೆ. ನಗರದಲ್ಲಿ ನಾಳೆ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ.
ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ಬೆನ್ನಲ್ಲೇ ಇದೀಗ ಮದ್ಯ ಮಾರಾಟ ನಿಷೇಧ ಮಾಡಿ ಬಳ್ಳಾರಿ ಡಿಸಿ ನಾಗೇಂದ್ರ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಗಲಭೆ ಖಂಡಿಸಿ ನಾಳೆ ಬಳ್ಳಾರಿಯಲ್ಲಿ ಬಿಜೆಪಿಯಿಂದ ಪ್ರತಿಭಟನಾ ಸಮಾವೇಶ ಹಿನ್ನೆಲೆ ನಗರದಲ್ಲಿ ಇಂದು ರಾತ್ರಿ 10 ಗಂಟೆಯಿಂದ ನಾಡಿದ್ದು ಅಂದರೆ ಜನವರಿ 18ರ ಬೆಳಗ್ಗೆ 6 ಗಂಟೆವರೆಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿರ್ಬಂಧಿಸಿ ಬಳ್ಳಾರಿ ಡಿಸಿ ನಾಗೇಂದ್ರ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಜನವರಿ 1ರಂದು ಶ್ರೀ ವಾಲ್ಮೀಕಿ ಮಹರ್ಷಿರವರ ಪುತ್ಥಳಿ ಅನಾವರಣ ಕಾರ್ಯಕ್ರಮದ ನಿಮಿತ್ತ ಹಾಕಿದ್ದ ಬ್ಯಾನರ್ ವಿಷಯವಾಗಿ ಗುಂಪು ಘರ್ಷಣೆ ನಡೆದಿದ್ದು, ಈ ಸಂಬಂಧ ಜನವರಿ 17ರಂದು ಬೆಳಿಗ್ಗೆ 10:30 ಗಂಟೆಗೆ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಇತರೇ ಪ್ರಮುಖ ರಾಜ್ಯ ನಾಯಕರು ಹಾಗೂ ಜಿಲ್ಲಾ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಬಳ್ಳಾರಿ ನಗರದ ಎಪಿಎಂಸಿ ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕವರ್ಡ್ ಯಾಕ್ಷನ್ ಪ್ಲಾಟ್ ಫಾರಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಬಳ್ಳಾರಿ ನಗರದಾದ್ಯಂತ ಪ್ರತಿಭಟನಾ ಸಭೆಯು ಶಾಂತ ರೀತಿಯಿಂದ ನಡೆಯುವ ಸಲುವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದು, ಈ ಬಂದೋಬಸ್ತ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜನವರಿ 17ರಂದು ಬೆಳಿಗ್ಗೆ 06 ಗಂಟೆಯಿಂದ ಜನವರಿ 18 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮಾಡದಂತೆ ಮತ್ತು ಮದ್ಯದಂಗಡಿಗಳನ್ನು ಬಳ್ಳಾರಿ ನಗರದಾದ್ಯಂತ ಮುಚ್ಚುವಂತೆ ನಿಷೇಧಾಜ್ಞೆ ಹೊರಡಿಸುವಂತೆ ಕೋರಲಾಗಿದೆ.


