ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಗೆಲುವು ಕಂಡಿದ್ದು, ಈ ಮೂಲಕ 25 ವರ್ಷಗಳ ನಂತರ ಮುಂಬೈ ನಾಗರಿಕ ಸಂಸ್ಥೆಯಾದ ಬಿಎಂಸಿ ಮೇಲೆ ಠಾಕ್ರೆ ಸಹೋದರರು ಹಿಡಿತ ಕಳೆದುಕೊಂಡಿದ್ದಾರೆ.
ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಅನೇಕ ಉದ್ಯಮಿಗಳು, ಸೆಲಬ್ರಿಟಿಗಳು, ರಾಜಕಾರಣಿಗಳ ವಾಸ ಸ್ಥಾನ. ಇದು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಕಾರ್ಪೋರೇಷನ್ ಆಗಿದೆ. ಬಿಎಂಸಿ ಸೇರಿದಂತೆ ಮಹಾರಾಷ್ಟ್ರದಾದ್ಯಂತ 29 ನಾಗರಿಕ ಸಂಸ್ಥೆಗಳಲ್ಲಿ ಮತದಾನ ನಡೆದಿತ್ತು. ಬಹುತೇಕ ಅನೇಕ ಕಡೆ ಬಿಜೆಪಿ ಈ ಬಾರಿ ಗೆಲುವಿನ ನಗು ಬೀರಿರುವುದು ವಿಶೇಷ.
ವಾರ್ಷಿಕ ಬಜೆಟ್ 74,400 ಕೋಟಿ ರೂ. ಮೀರಿರುವ ಬಿಎಂಸಿಯಲ್ಲಿ 9 ವರ್ಷಗಳ ವಿಳಂಬದ ನಂತರ ನಡೆದ ಚುನಾವಣೆಯಲ್ಲಿ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2017ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ, ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಒಂದಾಗಿದ್ದ ಸಂಯುಕ್ತ ಶಿವಸೇನೆ ದಶಕಗಳಿಂದ ನಿಯಂತ್ರಿಸುತ್ತಿದ್ದ ಬಿಎಂಸಿಯ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಅವರಿಬ್ಬರೂ ಬೇರೆ ಬೇರೆಯಾಗಿ ಅಖಾಡಕ್ಕಿಳಿದಿದ್ದರು.
ಬಿಜೆಪಿ-ಶಿವಸೇನೆ ಮೈತ್ರಿಕೂಟವು ವಿಜಯಶಾಲಿಯಾಗಿ ಹೊರಹೊಮ್ಮಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಐತಿಹಾಸಿಕ ಸಾಧನೆಯ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಾರೆ.
ಇದುವರೆಗೆ ಬಿಎಂಸಿಯ 227 ವಾರ್ಡ್‌ಗಳಲ್ಲಿ 88ರಲ್ಲಿ ಬಿಜೆಪಿ ಗೆದ್ದಿದೆ ಅಥವಾ ಮುನ್ನಡೆ ಸಾಧಿಸಿದೆ. ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 28 ಸ್ಥಾನಗಳಲ್ಲಿ ಮುಂದಿದೆ. ಈ ಮಹಾಯುತಿ ಮೈತ್ರಿಕೂಟವು 114ರ ಅರ್ಧದಷ್ಟನ್ನು ಆರಾಮವಾಗಿ ದಾಟಿದೆ.


