ಹೊಸ ದಿಗಂತ ವರದಿ, ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪವಿರುವ ಮಲ್ಲೂರಹಳ್ಳಿ ಭರಮಸಾಗರದಲ್ಲಿ ಬಿ.ಎ.ತಿಪ್ಪೇಸ್ವಾಮಿ, ಲಕ್ಷ್ಮಿ ದಂಪತಿಗಳು ಭರ್ಜರಿ ದಾಳಿಂಬೆ ಬೆಳೆದು ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಜಲಗಾವ್ ಜೈನ್ ಕಂಪನಿಯ ಕೆಆರ್‌ಎಸ್ ಭಗವ ತಳಿಯ ಗಿಡಗಳನ್ನು ೪೫ ರೂ.ಗಳಿಗೆ ಒಂದರಂತೆ ೨೦೫೦ ಗಿಡಗಳನ್ನು ಖರೀದಿಸಿ ಏಳು ಎಕರೆ ಜಮೀನಿನಲ್ಲಿ ನೆಟ್ಟಿರುವ ಈ ದಂಪತಿಗಳು ಎರಡು ವರ್ಷಗಳಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಕಾವಲು ಕಾಯುತ್ತಿರುವುದರಿಂದ ದಾಳಿಂಬೆ ಹಣ್ಣುಗಳು ಈಗ ಕೈಗೆ ಬಂದಿದ್ದು, ಒಂದು ಗಿಡದಲ್ಲಿ ೬೦ ಕ್ಕೂ ಅಧಿಕ ಹಣ್ಣುಗಳು ಬಿಟ್ಟಿವೆ. ಒಂದೊಂದು ಹಣ್ಣು ಅರ್ಧ ಕೆ.ಜಿ. ಯಷ್ಟಿದ್ದು, ಭಾರಕ್ಕೆ ನೆಲಕ್ಕೆ ತೂಗುತ್ತಿವೆ. ಗಿಳಿ, ಗುಬ್ಬಚ್ಚಿ, ಅಳಿಲುಗಳ ಕಾಟದಿಂದ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಬಲೆ ಹೆಣೆಯಲಾಗಿದೆ. ರಾತ್ರಿ ವೇಳೆ ಹಣ್ಣುಗಳನ್ನು ಕದಿಯಲು ಬರುವವರ ಮೇಲೆ ನಿಗಾ ಇಡಲು ಸೈರನ್ ಕ್ಯಾಮರಾ ಕೂಡ ಅಳವಡಿಸಲಾಗಿದೆ.
೨೦೨೪ ರಲ್ಲಿ ನೆಟ್ಟಿರುವ ಗಿಡಗಳಲ್ಲಿ ಹೂವು ಬಿಟ್ಟು ಕಾಯಿ ಕೈಗೆ ಬರುವತನಕ ಡ್ರಿಪ್ ಮೂಲಕ ದಿನಕ್ಕೆ ಒಂದು ಗಂಟೆ ನೀರು ಬಿಡುತ್ತೇವೆ. ಒಂದು ಕ್ರೇಟ್‌ಗೆ ೨೦ ಕೆ.ಜಿ. ರಟ್ಟಿನ ಬಾಕ್ಸ್ ಒಂದರಲ್ಲಿ ೧೦ ಕೆ.ಜಿ.ಯಷ್ಟು ಹಣ್ಣು ತುಂಬುತ್ತೇವೆ. ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಬಳಸಿದರೆ ಮಣ್ಣಿನ ಫಲವತ್ತತೆ ನಾಶವಾಗಿ ಗಿಡಗಳು ನಲುಗಿ ಹಾಕಿದ ಬಂಡವಾಳವು ಕೈಗೆ ಸೇರುವುದಿಲ್ಲ ಎನ್ನುವುದನ್ನು ಮನಗಂಡು ಪಾಂಡುರವರ ಸಲಹೆಯಂತೆ ಸಾವಯವ ಗೊಬ್ಬರವನ್ನೆ ಜಾಸ್ತಿ ಬಳಸಿರುವುದರಿಂದ ಗಿಡದ ತುಂಬೆಲ್ಲಾ ಹಣ್ಣುಗಳು ಕಂಗೊಳಿಸುತ್ತಿವೆ.
ರಕ್ತವನ್ನು ಶುದ್ದಿಗೊಳಿಸುವ ಸಾಮರ್ಥ್ಯವುಳ್ಳ ದಾಳಿಂಬೆಯಲ್ಲಿ ೨೧ ಬಗೆಯ ವಿಟಮಿನ್ ಪ್ರೋಟಿನ್‌ಗಳಿರುವುದರಿಂದ ನರಗಳನ್ನು ಚುರುಕುಗೊಳಿಸುತ್ತವೆ. ಇದರ ಸಿಪ್ಪೆಯಲ್ಲಿಯೂ ಮಹತ್ವವಿದೆ. ಮೊಳಕಾಲ್ಮುರು ಹಾಗೂ ಬಳ್ಳಾರಿಯ ಗಡಿ ಭಾಗಗಳಿಗೆ ಹೊಂದಿಕೊಂಡಿರುವ ಮಲ್ಲೂರಹಳ್ಳಿ ಬರಪೀಡಿತ ಪ್ರದೇಶ. ಮಳೆ ಬಂದರೆ ಬೆಳೆ. ಇಲ್ಲವಾದಲ್ಲಿ ರೈತರ ಪಾಡು ಹೇಳುವಂತಿಲ್ಲ. ಆದರೂ ಎದೆ ಗುಂದದೆ ದಾಳಿಂಬೆ ಬೆಳೆದಿದ್ದೇವೆ. ನಮ್ಮ ಜೊತೆ ಮಕ್ಕಳು ಸೊಸೆಯಂದಿರ ಪರಿಶ್ರಮವೂ ಅಡಗಿದೆ. ಹಣ್ಣು ಮಾರಾಟ ಮಾಡಲು ಮಾರುಕಟ್ಟೆ ಸಮಸ್ಯೆಯಿಲ್ಲ. ತಮಿಳುನಾಡು, ಹೈದರಾಬಾದ್‌ನಿಂದ ಬಂದು ಇಲ್ಲಿಯೇ ಖರೀಧಿಸುತ್ತಾರೆ.
ವಾಣಿಜ್ಯ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಈರುಳ್ಳಿ, ಮೆಕ್ಕೆಜೋಳವನ್ನೇ ಬೆಳೆಯುವ ಬದಲು ತೋಟಗಾರಿಕೆ ಬೆಳೆಗಳಿಗೆ ಏಕೆ ಕೈ ಹಾಕಬಾರದೆಂದು ಧೈರ್ಯ ಮಾಡಿ ದಾಳಿಂಬೆ ಗಿಡಗಳನ್ನು ನೆಟ್ಟ ಪರಿಣಾಮವಾಗಿ ಭೂಮಿ ತಾಯಿ ನಮ್ಮನ್ನು ಕೈಬಿಡಲಿಲ್ಲ ನಿರೀಕ್ಷೆಗೆ ತಕ್ಕಷ್ಟು ಫಲ ಸಿಕ್ಕಿದೆ. ಇನ್ನು ಏಳೆಂಟು ವರ್ಷಗಳ ಕಾಲ ಹಣ್ಣುಗಳನ್ನು ಪಡೆಯಬಹುದೆಂದು ರೈತ ದಂಪತಿಗಳಾದ ಬಿ.ಎ.ತಿಪ್ಪೇಸ್ವಾಮಿ ಹಾಗೂ ಲಕ್ಷ್ಮಿ ಕೃಷಿಯಲ್ಲಿನ ತಮ್ಮ ಅನುಭವ ಹಂಚಿಕೊಂಡರು.


