ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಕುರಿತು ಬಾಲಿವುಡ್ ನಟಿ ಖುಷಿ ಮುಖರ್ಜಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.ಇದೀಗ ನಟಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಜ. 13 ರಂದು ಖುಷಿ ಮುಖರ್ಜಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮುಂಬೈ ಮೂಲದ ಅನ್ಸಾರಿ ಅವರು ಘಾಜಿಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಕೂಡಲೇ ನಟಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಖುಷಿ ಮುಖರ್ಜಿ ಅವರ ಹೇಳಿಕೆಗಳು ಸೂರ್ಯಕುಮಾರ್ ಯಾದವ್ ಅವರ ಘನತೆಗೆ ಧಕ್ಕೆ ತರುವಂತಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಖುಷಿ ಮುಖರ್ಜಿ ನೀಡಿದ ಹೇಳಿಕೆಗಳು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರ. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟಿಗರ ಘನತೆಗೆ ಧಕ್ಕೆಯಾಗಬಹುದು. ಹಾಗಾಗಿ, ನಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸುಳ್ಳು ಹೇಳಿಕೆಗಳಿಗೆ ಗಂಭೀರ ಆರೋಪ ಹೊರಿಸಿ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಕೊಡಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
ಖುಷಿ ಮುಖರ್ಜಿ ಅವರು ಕ್ರಿಕೆಟಿಗರೊಂದಿಗೆ ಡೇಟ್ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಈ ವಿವಾದ ಅವ್ರೇ ಸೃಷ್ಟಿಸಿದ್ರು. ಯಾವುದೇ ಕ್ರಿಕೆಟಿಗರನ್ನ ಡೇಟ್ ಮಾಡಲು ತನಗೆ ಇಷ್ಟವಿಲ್ಲ ಎಂದ ಅವರು, ಅನೇಕ ಕ್ರಿಕೆಟಿಗರು ತನಗೆ ಆಸಕ್ತಿ ತೋರಿಸುತ್ತಿದ್ದರು ʻಸೂರ್ಯಕುಮಾರ್ ಯಾದವ್ ಅವರು ಹಿಂದೆ ತನಗೆ ತುಂಬಾ ಮೆಸೇಜ್ ಮಾಡುತ್ತಿದ್ದರುʼ. ಆದರೆ ಈಗ ಅವರು ಮಾತಾಡುತ್ತಿಲ್ಲ ಮತ್ತು ತನ್ನ ಹೆಸರನ್ನ ಅವರೊಂದಿಗೆ ಜೋಡಿಸಬಾರದು ಎಂದೂ ಅವರು ಹೇಳಿದ್ದರು.


