ಹೊಸದಿಗಂತ ವರದಿ ಬೀದರ್:
ಖಂಡ್ರೆ ಮನೆತನ ಹಾಗೂ ಭಾಲ್ಕಿ ಹಿರೇಮಠ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಠಕ್ಕಾಗಿ ಎಡಗೈ, ಬಲಗೈಯಾಗಿ ಭೀಮಣ್ಣಾ ಖಂಡ್ರೆ ಮನೆತನ ದುಡಿದಿದೆ ಎಂದು ಭಾಲ್ಕಿ ಹಿರೇಮಠದ ನಾಡೋಜ ಡಾ.ಬಸವಲಿಂಗ ಪಟ್ಟದೇವರು ತಿಳಿಸಿದರು.
ಶತಾಯುಷಿ, ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ವಿಧಿವಶರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ಯಾತೀತವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಗಲಿಕೆ ಸಮುದಾಯಕ್ಕೆ ದುಃಖ ತಂದಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಹಲವಾರು ರೀತಿಯಲ್ಲಿ ಸಮಾಜ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ದಿವಂಗತ ಭೀಮಣ್ಣ ಖಂಡ್ರೆ ಭಾಲ್ಕಿ ಮಠದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಲಿಂಗೈಕ್ಯ ಚನ್ನಬಸವ ಪಟ್ಟದೇವರು ಭೀಮಣ್ಣ ಖಂಡ್ರೆ ಅವರಿಗೆ ಲೋಕನಾಯಕ ಎಂಬ ಬಿರುದು ಕೊಟ್ಟಿದ್ರು. ಅದರಂತೆ ಭೀಮಣ್ಣ ಖಂಡ್ರೆ ಜೀವಿಸಿದ್ದರು. ಅವರ ಅಗಲಿಕೆಯಿಂದ ಸಮಾಜದ ಬಹುದೊಡ್ಡ ಆಸ್ತಿ ಕಳಚಿ ಹೋಗಿದೆ ಎಂದ ಅವರು, ಶನಿವಾರ ಇಂದು ಸಂಜೆ 5 ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.


