ಹಾರ್ಟ್ ಶೇಪ್ ಬಲೂನುಗಳು, ಕೆಂಪು ಗ್ರೀಟಿಂಗ್ ಕಾರ್ಡ್‌ಗಳು, ಸೋಷಿಯಲ್ ಮೀಡಿಯಾದ ಇಮೋಜಿಗಳು ನೋಡಿದರೆ ಪ್ರೀತಿ ಅಂದರೆ ನೇರವಾಗಿ ಹೃದಯದ ವಿಷಯ ಅನ್ನಿಸುವುದು ಸಹಜ. ಆದರೆ ನಿಜವಾಗಿಯೂ ಪ್ರೀತಿ ಹೃದಯದಲ್ಲಿ ಹುಟ್ಟುತ್ತದೆಯಾ? ಅಥವಾ ಮೆದುಳಿನ ಆಟವೇ? ಈ ಪ್ರಶ್ನೆಗೆ ಕೇವಲ ಭಾವನೆ ಅಲ್ಲ, ವಿಜ್ಞಾನವೂ ಉತ್ತರ ನೀಡುತ್ತದೆ. ಪ್ರೀತಿ ಮನುಷ್ಯನ ದೇಹ, ಮನಸ್ಸು ಮತ್ತು ಸಮಾಜ ಮೂರಕ್ಕೂ ಸಂಬಂಧಿಸಿದ ಆಳವಾದ ಪ್ರಕ್ರಿಯೆ.
ಪ್ರೀತಿ ಕೇವಲ ರೊಮ್ಯಾಂಟಿಕ್ ಆಕರ್ಷಣೆ ಅಲ್ಲ. ಅದು ವ್ಯಕ್ತಿಯನ್ನು ಅಲೆಮಾರಿ ಜೀವನದಿಂದ ಕುಟುಂಬ, ಜವಾಬ್ದಾರಿ ಮತ್ತು ಸಮಾಜದ ಚೌಕಟ್ಟಿನೊಳಗೆ ತರುತ್ತದೆ. ಪ್ರೀತಿಯಿಂದ ಕುಟುಂಬ ಹುಟ್ಟುತ್ತದೆ, ಕುಟುಂಬದಿಂದ ಸಮುದಾಯ ಬೆಳೆಯುತ್ತದೆ. ಪ್ರೀತಿ ಇಲ್ಲದಿದ್ದರೆ ನಾಗರಿಕತೆ ಎಂಬ ಕಲ್ಪನೆಯೇ ದುರ್ಬಲವಾಗುತ್ತಿತ್ತು.

ಮೆದುಳಿನ ಪಾತ್ರ ಏನು?
ಪ್ರೀತಿ ಆರಂಭವಾದಾಗ ಮೆದುಳು ಡೋಪಮೈನ್ ಎಂಬ ‘ಖುಷಿಯ ಹಾರ್ಮೋನ್’ ಬಿಡುಗಡೆ ಮಾಡುತ್ತದೆ. ಇದರಿಂದ ಆ ವ್ಯಕ್ತಿಯ ಜೊತೆ ಇರಬೇಕು, ಮತ್ತೆ ಮತ್ತೆ ನೋಡಬೇಕು ಅನ್ನಿಸುವ ತೀವ್ರ ಆಸಕ್ತಿ ಮೂಡುತ್ತದೆ. ಅಪ್ಪುಗೆ, ಸ್ಪರ್ಶ, ಕಿಸ್ ಇವೆಲ್ಲವೂ ಮೆದುಳಿಗೆ ಸಂತೋಷದ ಸಂಕೇತಗಳಾಗಿ ಕೆಲಸ ಮಾಡುತ್ತವೆ.
ಹೃದಯ ಯಾಕೆ ವೇಗವಾಗಿ ಬಡಿಯುತ್ತೆ?
ನಾವು ಪ್ರೀತಿಸಿದ ವ್ಯಕ್ತಿಯನ್ನು ನೋಡಿದಾಗ ಹೃದಯ ಬಡಿತ ಹೆಚ್ಚಾಗುತ್ತದೆ. ಆದರೆ ಇದಕ್ಕೆ ಆದೇಶ ನೀಡುವುದು ಮೆದುಳೇ. ಖುಷಿ, ಉತ್ಸಾಹ ಉಂಟಾದಾಗ ಮೆದುಳು ಹಾರ್ಮೋನ್‌ಗಳನ್ನು ಬಿಡುಗಡೆ ಮಾಡಿ ದೇಹದ ಪ್ರತಿಕ್ರಿಯೆಗಳನ್ನು ಚಾಲನೆ ಮಾಡುತ್ತದೆ.

ಬ್ರೇಕಪ್ ಆದಾಗ ಏನಾಗುತ್ತದೆ?
ಸಂಬಂಧ ಮುರಿದಾಗ ಮೆದುಳು ಒತ್ತಡದ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತದೆ. ಅದರಿಂದ ದುಃಖ, ಆಸಕ್ತಿ ಕಳೆದುಕೊಳ್ಳುವುದು, ಮಾನಸಿಕ ನೋವು ಹೆಚ್ಚಾಗುತ್ತದೆ. ಇದು ಸಹಜ ಪ್ರಕ್ರಿಯೆ.
ಒಟ್ಟಿನಲ್ಲಿ, ಪ್ರೀತಿ ಹೃದಯದಲ್ಲಿ ಅನುಭವವಾಗುತ್ತದೆ, ಆದರೆ ಅದರ ನಿಯಂತ್ರಣ ಮೆದುಳಿನ ಕೈಯಲ್ಲಿರುತ್ತದೆ. ಪ್ರೀತಿ ಅಂದರೆ ಭಾವನೆ ಮಾತ್ರವಲ್ಲ ಅದು ಜೀವನವನ್ನು ರೂಪಿಸುವ ಶಕ್ತಿ ಎಂದರೂ ತಪ್ಪಾಗಲಾರದು.


