ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋವಾದಲ್ಲಿ ಇಬ್ಬರು ಮಹಿಳೆಯರ ಹತ್ಯೆ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ರಷ್ಯಾದ ಮೂಲದ ವ್ಯಕ್ತಿಯೊಬ್ಬ ತನ್ನ ಇಬ್ಬರು ಸ್ನೇಹಿತೆಯರನ್ನು ಪ್ರತ್ಯೇಕ ಸ್ಥಳಗಳಲ್ಲಿ ಕತ್ತು ಸೀಳಿ ಕೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದ್ದು, ಆರೋಪಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಗೋವಾದ ಮೊರ್ಜಿಮ್ ಹಾಗೂ ಅರಾಂಬೋಲ್ ಪ್ರದೇಶಗಳಲ್ಲಿ ವಾಸವಾಗಿದ್ದ 37 ವರ್ಷದ ಎಲೆನಾ ವನೀವಾ ಮತ್ತು ಎಲೆನಾ ಕಸ್ತನೋವಾ ಎಂಬ ಮಹಿಳೆಯರು ಈ ಭೀಕರ ಕೃತ್ಯಕ್ಕೆ ಬಲಿಯಾಗಿದ್ದಾರೆ. ಆರೋಪಿಯು ಅಲೆಕ್ಸಿ ಲಿಯೊನೊವ್ ಎಂಬ ರಷ್ಯನ್ ನಾಗರಿಕ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸ್ ಮಾಹಿತಿಯಂತೆ, ಜನವರಿ 14ರಂದು ಮೊರ್ಜಿಮ್‌ನಲ್ಲಿ ವಾಸಿಸುತ್ತಿದ್ದ ಎಲೆನಾ ವನೀವಾ ಅವರ ನಿವಾಸದಲ್ಲಿ ಆರೋಪಿಯು ಆಕೆಯ ಕತ್ತು ಸೀಳಿ ಹತ್ಯೆ ನಡೆಸಿದ್ದಾನೆ. ಇದಾದ ಮರು ದಿನ, ಜನವರಿ 15ರಂದು ಸಂಜೆ, ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಅರಾಂಬೋಲ್ ಗ್ರಾಮಕ್ಕೆ ತೆರಳಿದ ಲಿಯೊನೊವ್, ಅಲ್ಲಿದ್ದ ತನ್ನ ಮತ್ತೊಬ್ಬ ಸ್ನೇಹಿತೆ ಎಲೆನಾ ಕಸ್ತನೋವಾವನ್ನು ಹಗ್ಗದಿಂದ ಕಟ್ಟಿಹಾಕಿ, ಕತ್ತು ಸೀಳಿ ಕೊಂದಿದ್ದಾನೆ ಎನ್ನಲಾಗಿದೆ.
ಜನವರಿ 16ರಂದು ಇಬ್ಬರು ಮಹಿಳೆಯರ ಶವಗಳು ಪತ್ತೆಯಾಗಿದ್ದು, ವನೀವಾ ವಾಸವಾಗಿದ್ದ ಮನೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.


