ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು ಕಸರತ್ತು ತೀವ್ರಗೊಂಡಿದೆ. ನಿನ್ನೆ ಹೊರಬಿದ್ದ ಫಲಿತಾಂಶದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ ಮಿತ್ರಪಕ್ಷವಾದ ಶಿವಸೇನೆಯ (ಶಿಂಧೆ ಬಣ) ಬೆಂಬಲ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ತಮ್ಮ ಕಾರ್ಪೊರೇಟರ್‌ಗಳಿಗೆ ಇತರ ಪಕ್ಷಗಳಿಂದ ಆಮಿಷ ಎದುರಾಗಬಹುದು ಎಂಬ ಆತಂಕದಲ್ಲಿ ಏಕನಾಥ್ ಶಿಂಧೆ ತಮ್ಮ ತಂಡವನ್ನು ಬಾಂದ್ರಾದ ಪಂಚತಾರಾ ಹೋಟೆಲ್‌ಗೆ ಶಿಫ್ಟ್ ಮಾಡಿದ್ದಾರೆ.
227 ವಾರ್ಡ್‌ಗಳ ಪೈಕಿ ಬಿಜೆಪಿ 89 ಸ್ಥಾನಗಳನ್ನು ಗೆದ್ದಿದ್ದರೆ, ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಪಡೆದಿದೆ. ಮೈತ್ರಿಕೂಟದ ಒಟ್ಟು ಬಲ 118 ಆಗಿದ್ದು, ಮ್ಯಾಜಿಕ್ ನಂಬರ್ (114) ದಾಟಿದ್ದರೂ ಸಹ “ಸುರಕ್ಷತಾ ಕ್ರಮ”ವಾಗಿ ರೆಸಾರ್ಟ್ ಪಾಲಿಟಿಕ್ಸ್ ಆರಂಭವಾಗಿದೆ.
ಶಿಂಧೆ ಬಣದ ಎಲ್ಲಾ 29 ಕಾರ್ಪೊರೇಟರ್‌ಗಳನ್ನು ಬಾಂದ್ರಾದ ಐಷಾರಾಮಿ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ಇರಿಸಲಾಗಿದೆ. ಮೇಯರ್ ಪಟ್ಟ ಯಾರಿಗೆ ಸಿಗಲಿದೆ ಎಂಬ ಚೌಕಾಶಿ ನಡೆಯುತ್ತಿರುವಾಗಲೇ ಈ ಬೆಳವಣಿಗೆ ಸಂಭವಿಸಿದೆ.
2019ರ ಬಿಕ್ಕಟ್ಟು ಹಾಗೂ 2022ರ ಶಿವಸೇನೆ ವಿಭಜನೆಯ ವೇಳೆಯೂ ಮಹಾರಾಷ್ಟ್ರ ಇದೇ ರೀತಿಯ ರೆಸಾರ್ಟ್ ರಾಜಕೀಯಕ್ಕೆ ಸಾಕ್ಷಿಯಾಗಿತ್ತು. ಈಗ ಬಿಎಂಸಿ ಮೇಯರ್ ಆಯ್ಕೆಯ ಹೊತ್ತಿನಲ್ಲೂ ಅದೇ ತಂತ್ರವನ್ನು ಅನುಸರಿಸಲಾಗುತ್ತಿದೆ.
ಬಿಜೆಪಿಯು 2017ರ ತನ್ನ ದಾಖಲೆಯನ್ನು ಮುರಿದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ, ಕಿಂಗ್ ಮೇಕರ್ ಆಗಿರುವ ಏಕನಾಥ್ ಶಿಂಧೆ ತಮ್ಮ ಶಕ್ತಿಯನ್ನು ಉಳಿಸಿಕೊಳ್ಳಲು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಅಧಿಕೃತವಾಗಿ ಮೇಯರ್ ಪಟ್ಟ ಅಲಂಕರಿಸುವವರೆಗೂ ಕಾರ್ಪೊರೇಟರ್‌ಗಳು ಹೋಟೆಲ್‌ನಲ್ಲೇ ಇರುವಂತೆ ಸೂಚಿಸಲಾಗಿದೆ.


