ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದ ನಂತರದ 11 ತಿಂಗಳ ಅವಧಿಯಲ್ಲಿ ರಾಜ್ಯವು 1.53 ಲಕ್ಷ ಕೋಟಿ ರೂ.ಗಳಷ್ಟು ಹೊಸ ಹೂಡಿಕೆಯ ಹಲವು ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಶನಿವಾರ ತಿಳಿಸಿದ್ದಾರೆ.
ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಅವರು ಈ ವಿವರ ಮತ್ತು ಅಂಕಿಅಂಶಗಳನ್ನು ನೀಡಿದ್ದಾರೆ.
ರಾಜ್ಯಕ್ಕೆ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿದ್ದು, ಅದು ಕೇವಲ ಹೂಡಿಕೆದಾರರ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸಚಿವರು ಪ್ರತಿಪಾದಿಸಿದ್ದಾರೆ.
ತಯಾರಿಕೆ, ಮರುಬಳಕೆ ಇಂಧನ, ಡೇಟಾ ಕೇಂದ್ರಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆ ವಲಯಗಳಲ್ಲಿ ಹಲವು ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ. ಈ ಪ್ರಸ್ತಾವನೆಗಳು ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ಉದ್ಯೋಗ ಮಿತ್ರಕ್ಕೆ ಬರಲಿದ್ದು, ಮುಂದಿನ ಹಂತದ ಪ್ರಕ್ರಿಯೆಗಳು ತ್ವರಿತವಾಗಿ ನಡೆಯಲಿವೆ ಎಂದಿದ್ದಾರೆ.
11 ತಿಂಗಳಲ್ಲಿ ಆಕರ್ಷಿಸಿರುವ ಹೊಸ ಬಂಡವಾಳದಲ್ಲಿ ತಯಾರಿಕೆ ವಲಯದಲ್ಲಿ 66,293 ಕೋಟಿ, ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ 20,913 ಕೋಟಿ, ಜಿಸಿಸಿ ಕೇಂದ್ರಗಳ ಸ್ಥಾಪನೆಗೆ 12,500 ಕೋಟಿ, ಮತ್ತು ಡೇಟಾ ಸೆಂಟರುಗಳ ಸ್ಥಾಪನೆಗೆ 6,350 ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದು ಅವರು ಹೇಳಿದ್ದಾರೆ.


