January17, 2026
Saturday, January 17, 2026
spot_img

ಬಡವರ ಪಾಲಿನ ‘ಮನೆ’ ಭಾಗ್ಯ: ಜ.24ರಂದು 42,345 ಕುಟುಂಬಗಳಿಗೆ ಹೊಸ ಸೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಬಡ ಕುಟುಂಬಗಳ ಪಾಲಿಗೆ ಹೊಸ ವರ್ಷದ ಸಂಕ್ರಾಂತಿ ಉಡುಗೊರೆಯಾಗಿ ಬೃಹತ್ ಮನೆ ಹಂಚಿಕೆ ಕಾರ್ಯಕ್ರಮ ಘೋಷಣೆಯಾಗಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಜನವರಿ 24ರಂದು ರಾಜ್ಯಾದ್ಯಂತ ಒಟ್ಟು 42,345 ಮನೆಗಳನ್ನು ವಿತರಿಸಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.

ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಈ ಸಮಾರಂಭಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಸಚಿವರು ನೀಡಿದ ಮಾಹಿತಿಯಂತೆ, ಈ ಯೋಜನೆ ಒಟ್ಟು ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ:

ಮೊದಲ ಹಂತ: ಈಗಾಗಲೇ 36,789 ಮನೆಗಳನ್ನು ವಿತರಿಸಲಾಗಿದೆ.

ಎರಡನೇ ಹಂತ: ಈಗ 42,345 ಮನೆಗಳ ಹಂಚಿಕೆ ನಡೆಯುತ್ತಿದೆ (ಇದರಲ್ಲಿ ಧಾರವಾಡ ಜಿಲ್ಲೆಯ 2,767 ಮನೆಗಳು ಸೇರಿವೆ).

ಮೂರನೇ ಹಂತ: ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಅಂದಾಜು 30,000 ಮನೆಗಳನ್ನು ನೀಡುವ ಗುರಿ ಹೊಂದಲಾಗಿದೆ.

ಈ ಬೃಹತ್ ಯೋಜನೆಯಡಿ ಒಟ್ಟು 1,80,253 ಮನೆಗಳು ನಿರ್ಮಾಣವಾಗುತ್ತಿವೆ. ಪ್ರತಿ ಮನೆಗೆ ರಾಜ್ಯ ಸರ್ಕಾರ 4 ಲಕ್ಷ ರೂ. ಸಹಾಯಧನ ನೀಡುತ್ತಿದ್ದು, ಕೇಂದ್ರ ಸರ್ಕಾರದ ಸಬ್ಸಿಡಿಯೂ ಲಭ್ಯವಿದೆ. ಫಲಾನುಭವಿಗಳು ಕೇವಲ 1 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ 20,363 ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರವನ್ನೂ ವಿತರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

Must Read

error: Content is protected !!