ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿಯ ಮಣಿಕರ್ಣಿಕಾ ಘಾಟ್ ನವೀಕರಣಕ್ಕೆ ಸಂಬಂಧಿಸಿದಂತೆ ಹರಡಿರುವ ವದಂತಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟನೆ ನೀಡಿದ್ದಾರೆ.
ವಾರಣಾಸಿಯಲ್ಲಿ ಯಾವುದೇ ದೇವಸ್ಥಾನವನ್ನಾಗಲಿ ಅಥವಾ ಐತಿಹಾಸಿಕ ಪ್ರತಿಮೆಯನ್ನಾಗಲಿ ಕೆಡವಿಲ್ಲ ಎಂದು ಅವರು ಖಚಿತಪಡಿಸಿ, ಕಾಶಿಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಕಾಂಗ್ರೆಸ್ ಈ ವಿವಾದ ಸೃಷ್ಟಿಸಿದೆ ಎಂದು ಆರೋಪಿಸಿದರು.
ಮಣಿಕರ್ಣಿಕಾ ಘಾಟ್ ಅಭಿವೃದ್ಧಿ ಕಾರ್ಯದ ವೇಳೆ ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೋ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸುಳ್ಳು ವಿಡಿಯೋ ಎಂದು ಯೋಗಿ ಹೇಳಿದರು. ಆ ಪ್ರತಿಮೆಯನ್ನು ಸಂಪೂರ್ಣ ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ವಿಡಿಯೋ ವೈರಲ್ ಆದ ಬಳಿಕ ಕೆಲವೆಡೆ ಪ್ರತಿಭಟನೆಗಳು ನಡೆದಿದ್ದು, ಇದರಿಂದ ಅನಗತ್ಯ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ವಾರಣಾಸಿಗೆ ಭೇಟಿ ನೀಡಿದ ಮುಖ್ಯಮಂತ್ರಿ, ವಿವಾದದ ಹಿಂದೆ ಇರುವ ಶಕ್ತಿಗಳನ್ನು ಬಹಿರಂಗಪಡಿಸುವ ಅಗತ್ಯವಿದೆ ಎಂದು ಹೇಳಿದರು. ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೇ ಈ ರೀತಿಯ ಸುಳ್ಳು ದೃಶ್ಯಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದರು.
“ಇದು ಕಾಶಿಯ ಪಾವಿತ್ರ್ಯ ಮತ್ತು ಗೌರವಕ್ಕೆ ಧಕ್ಕೆ ತರುವ ಸಂಚು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಿಜಾಸತ್ಯವನ್ನು ಜನರ ಮುಂದೆ ಇಡುತ್ತೇವೆ” ಎಂದು ಯೋಗಿ ಆದಿತ್ಯನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


