ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನಿಗಳ ನಿರೀಕ್ಷೆಗಳಿಗೆ ಧಕ್ಕೆ ಆಗಬಾರದು ಎನ್ನುವ ಕಾರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಈ ತೀರ್ಮಾನದ ಹಿಂದೆ ಸುರಕ್ಷತೆ ಮತ್ತು ಜವಾಬ್ದಾರಿಯೇ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದರು.
ಮೈದಾನದ ಸೌಲಭ್ಯಗಳು ಮತ್ತು ವ್ಯವಸ್ಥೆಗಳ ಕುರಿತು ಕುನ್ಹಾ ಸಮಿತಿ ಕೆಲವು ಸಲಹೆಗಳನ್ನು ನೀಡಿತ್ತು. ಅವುಗಳನ್ನು ಕ್ಯಾಬಿನೆಟ್ ಮಟ್ಟದಲ್ಲಿ ಚರ್ಚಿಸಿ, ಜಿಬಿಎ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗಿದೆ. ಸಮಿತಿಯ ಸೂಚನೆಗಳನ್ನು ಕೆಎಸ್‌ಸಿಎಗೆ ರವಾನಿಸಲಾಗಿದ್ದು, ಅಗತ್ಯ ತಿದ್ದುಪಡಿ ಮಾಡುವುದಾಗಿ ಸಂಸ್ಥೆ ಭರವಸೆ ನೀಡಿದೆ ಎಂದು ಸಚಿವರು ತಿಳಿಸಿದರು.
ಮಾರ್ಚ್‌ನಲ್ಲಿ ಐಪಿಎಲ್ ಆರಂಭವಾಗುತ್ತಿರುವ ಹಿನ್ನೆಲೆ, ಅಲ್ಪಾವಧಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ಪೂರ್ಣಗೊಳಿಸಬೇಕೆಂದು ಸರ್ಕಾರ ಷರತ್ತು ವಿಧಿಸಿದೆ. ಈ ಅವಧಿಯಲ್ಲಿ ಸುರಕ್ಷತೆ ಸಂಬಂಧಿತ ವ್ಯವಸ್ಥೆಗಳನ್ನು ಸರಿಪಡಿಸಿದರೆ ಮಾತ್ರ ಮುಂದುವರಿದ ಅನುಮತಿ ದೊರೆಯಲಿದೆ ಎಂದು ಹೇಳಿದರು. ಈಗಾಗಲೇ ಕ್ರೀಡಾಂಗಣದಲ್ಲಿ ಕೆಲ ಕೆಲಸಗಳು ಆರಂಭವಾಗಿದ್ದು, ಪ್ರವೇಶ ದ್ವಾರಗಳ ಪುನರ್ ವ್ಯವಸ್ಥೆ ನಡೆಯುತ್ತಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಜನರ ಸುರಕ್ಷತೆ ಮತ್ತು ನಿರೀಕ್ಷೆಗಳೆರಡಕ್ಕೂ ಜವಾಬ್ದಾರಿ ಇದೆ. ಎಲ್ಲ ಅಂಶಗಳನ್ನು ಮರುಪರಿಶೀಲಿಸಿ, ನಿಯಮಗಳು ಪೂರ್ತಿಯಾದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.


