ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ನಿರ್ಧಾರಗಳ ದಿಕ್ಕು ನಿರ್ಧರಿಸುವ ವರ್ಲ್ಡ್ ಎಕನಾಮಿಕ್ ಫೋರಂ (WEF) 2026 ಶೃಂಗಸಭೆ ಇನ್ನೇನು ಆರಂಭವಾಗಲಿದೆ. ಈ ಬಾರಿ ದಾವೋಸ್ನಲ್ಲಿ ಭಾರತದ ಹಾಜರಾತಿ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾಜಕೀಯ ನಾಯಕತ್ವದಿಂದ ಹಿಡಿದು ಉದ್ಯಮ ದಿಗ್ಗಜರವರೆಗೆ, ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಗಣ್ಯರು ಜಾಗತಿಕ ಚರ್ಚೆಗಳ ಕೇಂದ್ರಬಿಂದುವಾಗಿದ್ದಾರೆ.
ಜನವರಿ 19ರಿಂದ 23ರವರೆಗೆ ನಡೆಯಲಿರುವ ಐದು ದಿನಗಳ ಈ ಸಭೆಯಲ್ಲಿ 3,000ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದಾರೆ. ಅಮೆರಿಕದ ದೊಡ್ಡ ನಿಯೋಗದ ಜೊತೆಗೆ, ಭಾರತೀಯ ನಾಯಕರು ಮತ್ತು ಉದ್ಯಮಿಗಳು ಸಭೆಗಳ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಭಾರತದಿಂದ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಅಶ್ವಿನಿ ವೈಷ್ಣವ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೆ. ರಾಮಮೋಹನ್ ನಾಯ್ಡು ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರ ಸಿಎಂ ದೆವೇಂದ್ರ ಫಡ್ಣವಿಸ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಸ್ಸಾಂ ಸಿಎಂ ಹಿಮಂತ ಬಸ್ವ ಶರ್ಮಾ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಜಾರ್ಖಂಡ್ ಸಿಎಂ ಹೇಮಂತ್ ಸೋರೇನ್ ಅವರು ದಾವೋಸ್ಗೆ ತೆರಳಿ ಹೂಡಿಕೆ, ಉದ್ಯೋಗ ಮತ್ತು ಅಭಿವೃದ್ಧಿ ಕುರಿತ ಮಾತುಕತೆಗಳಲ್ಲಿ ಭಾಗವಹಿಸಲಿದ್ದಾರೆ.
ದಾವೋಸ್ ಕಾಂಗ್ರೆಸ್ ಸೆಂಟರ್ನಲ್ಲಿ ಭಾರತದ ಎಂಟು ರಾಜ್ಯಗಳಿಗೆ ಒಂದೇ ವೇದಿಕೆಯಡಿ ವಿಶೇಷ ಪೆವಿಲಿಯನ್ಗಳನ್ನು ಮೀಸಲಿರಿಸಲಾಗಿದೆ. ‘ಇನ್ವೆಸ್ಟ್ ಕರ್ನಾಟಕ’ ಸೇರಿದಂತೆ ಹಲವು ರಾಜ್ಯಗಳು ಹೂಡಿಕೆದಾರರನ್ನು ಸೆಳೆಯುವ ಉದ್ದೇಶದಿಂದ ಪ್ರತ್ಯೇಕ ಸಭೆಗಳನ್ನು ನಡೆಸಲಿವೆ. ಕರ್ನಾಟಕ ಸರ್ಕಾರವನ್ನು ಸಚಿವರಾದ ಎಂಬಿ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿದ್ದಾರೆ.
ಉದ್ಯಮ ಕ್ಷೇತ್ರದಲ್ಲಿ ಮುಕೇಶ್ ಅಂಬಾನಿ, ಸುನೀಲ್ ಭಾರ್ತಿ ಮಿಟ್ಟಲ್, ನಂದನ್ ನಿಲೇಕಣಿ, ಎನ್. ಚಂದ್ರಶೇಖರನ್, ನಿಖಿಲ್ ಕಾಮತ್ ಸೇರಿದಂತೆ ನೂರಕ್ಕೂ ಹೆಚ್ಚು ಭಾರತೀಯ ಉದ್ಯಮಿಗಳು ಪಾಲ್ಗೊಳ್ಳುತ್ತಿರುವುದು, ಜಾಗತಿಕ ಆರ್ಥಿಕ ವೇದಿಕೆಯಲ್ಲಿ ಭಾರತದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.


