ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಡವಿಗೊಡೆಯನ ನಾಡು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶೀರೂರು ಪರ್ಯಾಯ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಇಂದು ಬೆಳಗ್ಗೆ 5 ಗಂಟೆ 45 ನಿಮಿಷದ ಶುಭ ಮುಹೂರ್ತದಲ್ಲಿ ಅಕ್ಷಯ ಪಾತ್ರೆ ಸ್ವೀಕರಿಸುವ ಮೂಲಕ ಶೀರೂರು ಮಠಾಧೀಶರಾದ ಶ್ರೀ ವೇದ ವರ್ಧನ ತೀರ್ಥರು, ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣನ ಪೂಜೆ ಮಾಡುವ ಅಧಿಕಾರ ಪಡೆದುಕೊಂಡರು.

ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಮೊದಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ. ಶ್ರೀಗಳು ಇಂದು ಮುಂಜಾನೆ ಸುಮಾರು 2 ಗಂಟೆಯಿಂದ ಕಾಪು ಬಳಿಯ ದಂಡತೀರ್ಥದಲ್ಲಿ ತೀರ್ಥಸ್ನಾನ ಮುಗಿಸಿ, ಬಳಿಕ ಜೋಡುಕಟ್ಟೆಗೆ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರು ಆಗಮಿಸಿದರು. ಅಷ್ಟ ಮಠಗಳ ಮಠಾಧೀಶರ ಸಮ್ಮುಖದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ವಿಜೃಂಬಣೆಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಜೋಡುಕಟ್ಟೆಯಿಂದ ಪ್ರಾರಂಭವಾದ ಈ ಮೆರವಣಿಗೆಯಲ್ಲಿ ಚಂಡೆವಾದನ, ಬಗೆ ಬಗೆಯ ವೇಷ, ಹುಲಿವೇಷ, ಯಕ್ಷಗಾನ, ಶಂಖನಾದ ಹಾಗೂ ಪುರಾಣದ ಕಥೆ ಸಾರುವ ಟ್ಯಾಬ್ಲೋಗಳು ಸೇರಿದಂತೆ ಸುಮಾರು 100ಕ್ಕೂ ಅಧಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಬಳಿಕ ಅಕ್ಷಯ ಪಾತ್ರೆ ಸ್ವೀಕಾರ, ಸರ್ವಜ್ಞ ಪೀಠಾರೋಹಣ, ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ದೇಶ, ವಿದೇಶಗಳಿಂದ ಭಕ್ತರ ಸಮೂಹವೇ ಹರಿದುಬಂದಿದ್ದು, ಪರ್ಯಾಯವನ್ನು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು.


