January18, 2026
Sunday, January 18, 2026
spot_img

ಇಂದೋರ್‌ನಲ್ಲಿ ಕಿವೀಸ್ ಅಬ್ಬರ: ಭಾರತದ ವಿರುದ್ಧ ಗ್ಲೆನ್ ಫಿಲಿಪ್ಸ್ ಚೊಚ್ಚಲ ಶತಕದ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಸ್ಫೋಟಕ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ಬೃಹತ್ ಮೊತ್ತ ಪೇರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಶಾಕ್ ನೀಡಿದರು. ಕೇವಲ 58 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಒಂದಾದ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿ ಭಾರತೀಯ ಬೌಲರ್‌ಗಳನ್ನು ದಂಡಿಸುತ್ತಾ ತಂಡವನ್ನು ಸುಸ್ಥಿತಿಗೆ ತಂದರು.

ಸಾಮಾನ್ಯವಾಗಿ ಅಬ್ಬರದ ಬ್ಯಾಟಿಂಗ್‌ಗೆ ಹೆಸರಾದ ಗ್ಲೆನ್ ಫಿಲಿಪ್ಸ್, ಈ ಪಂದ್ಯದಲ್ಲಿ ಬಹಳ ಜವಾಬ್ದಾರಿಯುತ ಆಟವಾಡಿದರು. ಕೇವಲ 53 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ನಂತರ ಕೇವಲ 30 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಒಟ್ಟು 88 ಎಸೆತಗಳನ್ನು ಎದುರಿಸಿದ ಫಿಲಿಪ್ಸ್ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 106 ರನ್ ಚಚ್ಚಿದರು. ಇದು ಭಾರತದ ವಿರುದ್ಧ ಅವರ ಚೊಚ್ಚಲ ಶತಕವಾಗಿದ್ದು, ಒಟ್ಟಾರೆ ಏಕದಿನ ವೃತ್ತಿಜೀವನದ ಎರಡನೇ ಶತಕವಾಗಿದೆ.

ಇನ್ನೊಂದೆಡೆ ಡ್ಯಾರಿಲ್ ಮಿಚೆಲ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದು, ಸರಣಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದರು. ಮಿಚೆಲ್ ಮತ್ತು ಫಿಲಿಪ್ಸ್ ಜೋಡಿ ನಾಲ್ಕನೇ ವಿಕೆಟ್‌ಗೆ 219 ರನ್‌ಗಳ ಬೃಹತ್ ಜೊತೆಯಾಟವಾಡಿ ಭಾರತಕ್ಕೆ ಸವಾಲೊಡ್ಡಿದರು. ಮಿಚೆಲ್ 137 ರನ್ ಗಳಿಸಿ ಮಿಂಚಿದರು.

ಅಂತಿಮವಾಗಿ 44ನೇ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಈ ಅಪಾಯಕಾರಿ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಸಾಹಸದಿಂದಾಗಿ ನ್ಯೂಜಿಲೆಂಡ್ ತಂಡವು ಇಂದೋರ್ ಪಂದ್ಯದಲ್ಲಿ ಬಲಿಷ್ಠ ಸ್ಥಿತಿಯಲ್ಲಿದೆ.

Must Read

error: Content is protected !!