ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೀನ್‌ಲ್ಯಾಂಡ್ ದ್ವೀಪವನ್ನು ಖರೀದಿಸುವ ಅಮೆರಿಕದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಡೆನ್ಮಾರ್ಕ್ ಮತ್ತು ಅದರ ಬೆಂಬಲಕ್ಕೆ ನಿಂತಿರುವ ಐರೋಪ್ಯ ರಾಷ್ಟ್ರಗಳ ಮೇಲೆ ಡೊನಾಲ್ಡ್ ಟ್ರಂಪ್ ಆರ್ಥಿಕ ಯುದ್ಧ ಸಾರಿದ್ದಾರೆ. ಫೆಬ್ರುವರಿ 1ರಿಂದ ಜಾರಿಗೆ ಬರುವಂತೆ ಎಂಟು ಪ್ರಮುಖ ಐರೋಪ್ಯ ದೇಶಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಸದ್ಯ ಶೇ. 10ರಷ್ಟಿರುವ ಸುಂಕವು ಜೂನ್ 1ರಿಂದ ಶೇ. 25ಕ್ಕೆ ಏರಿಕೆಯಾಗಲಿದೆ. ಗ್ರೀನ್‌ಲ್ಯಾಂಡ್ ಅಮೆರಿಕದ ವಶವಾಗುವವರೆಗೂ ಈ ದಂಡನಾತ್ಮಕ ಕ್ರಮ ಮುಂದುವರಿಯಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಗುರಿ ಮಾಡಲಾದ ದೇಶಗಳು: ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಯುಕೆ, ನೆದರ್ಲೆಂಡ್ಸ್ ಮತ್ತು ಫಿನ್ಲೆಂಡ್.
ಬ್ರಿಟನ್ ಸೇರಿದಂತೆ 27 ಸದಸ್ಯ ರಾಷ್ಟ್ರಗಳ ಐರೋಪ್ಯ ಒಕ್ಕೂಟವು ಭಾನುವಾರ ತುರ್ತು ಸಭೆ ನಡೆಸಿ, ಅಮೆರಿಕದ ಈ “ಬ್ಲ್ಯಾಕ್‌ಮೇಲ್” ತಂತ್ರಕ್ಕೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಟ್ರಂಪ್ ನೇತೃತ್ವದ ಅಮೆರಿಕವು ತನ್ನ ಮಿತ್ರ ರಾಷ್ಟ್ರಗಳಾದ ಕೆನಡಾ, ಆಸ್ಟ್ರೇಲಿಯಾ ಮತ್ತು ಯೂರೋಪ್ ದೇಶಗಳನ್ನೇ ಆಕ್ರಮಣಕಾರಿ ವ್ಯಾಪಾರ ನೀತಿಗಳ ಮೂಲಕ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಈ ಬೆಳವಣಿಗೆಯು ಭಾರತಕ್ಕೆ ಒಂದು ಪ್ರಮುಖ ಪಾಠವಾಗಿದೆ. ಈ ಹಿಂದೆ ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್‌ನ ಛಾಬಹಾರ್ ಬಂದರು ಯೋಜನೆ ಮತ್ತು ಬ್ರಿಕ್ಸ್ ಒಕ್ಕೂಟದ ವಿಷಯದಲ್ಲಿ ಭಾರತ ಕೆಲವು ರಾಜಿಗಳನ್ನು ಮಾಡಿಕೊಂಡಿತ್ತು. ಆದರೆ, ಇಷ್ಟೆಲ್ಲಾ ಸಹಕರಿಸಿದರೂ ಅಮೆರಿಕದ ಬೆದರಿಕೆಗಳು ನಿಂತಿಲ್ಲ. ಈ ಹಿನ್ನೆಲೆಯಲ್ಲಿ, ಭಾರತವು ಯಾವುದೇ ದೇಶದ ಒತ್ತಡಕ್ಕೆ ಮಣಿಯದೆ ‘ಸ್ವಾಯತ್ತ ಕಾರ್ಯತಂತ್ರ’ ನಿಲುವು ತಳೆಯುವುದು ಇಂದಿನ ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


