ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದ ಆಟ ಈಗ ರೋಚಕ ತಿರುವು ಪಡೆದುಕೊಂಡಿದೆ. ಕಾರ್ಯಕ್ರಮದ ಆರಂಭದಿಂದಲೂ ‘ಗಿಲ್ಲಿ’ ನಟನ ನೆಚ್ಚಿನ ಗೆಳತಿಯಾಗಿ, ಮನೆಯ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕಾವ್ಯ ಶೈವ ಅವರು ಟೈಟಲ್ ಗೆಲ್ಲುವ ಹಂತಕ್ಕೆ ತಲುಪುವ ಮೊದಲೇ ಮನೆಯಿಂದ ಹೊರಬಂದಿದ್ದಾರೆ.
ಹಲವು ಏರಿಳಿತಗಳ ನಡುವೆಯೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ಕಾವ್ಯ, ಫಿನಾಲೆ ಹಂತದ ಅತೀ ಹತ್ತಿರದಲ್ಲೇ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಮನೆಯೊಳಗೆ ಗಿಲ್ಲಿ ನಟನೊಂದಿಗೆ ಅವರಿಗಿದ್ದ ಆಪ್ತತೆ ಮತ್ತು ಅವರು ತೋರಿದ ಕೆಚ್ಚೆದೆಯ ಆಟ ಸದಾ ನೆನಪಿನಲ್ಲಿ ಉಳಿಯುವಂತದ್ದು. ಗೆಲುವಿನ ಶಿಖರ ಏರುವ ಕನಸು ಕಂಡಿದ್ದ ಕಾವ್ಯ ಶೈವ, ಇದೀಗ ಆಟದ ಅಂತಿಮ ಘಟ್ಟದ ಸನಿಹದಲ್ಲೇ ವೇದಿಕೆಯಿಂದ ನಿರ್ಗಮಿಸಿದ್ದಾರೆ.


