ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ನಂಬಿಕಸ್ತ ಆಟಗಾರ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದಾರೆ. ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಪ್ರತಿಮ ಶತಕ ಸಿಡಿಸುವ ಮೂಲಕ ಕೊಹ್ಲಿ ಹಲವು ಐತಿಹಾಸಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ನೀಡಿದ 338 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕೇವಲ 28 ರನ್‌ಗಳಿಗೆ ನಾಯಕ ರೋಹಿತ್ ಶರ್ಮಾ ಔಟಾದರೆ, ತಂಡದ ಮೊತ್ತ 71 ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್‌ಗಳು ಪತನಗೊಂಡಿದ್ದವು. ಸೋಲಿನ ಸುಳಿಗೆ ಸಿಲುಕಿದ್ದ ತಂಡವನ್ನು ಆಧರಿಸಿದ ಕೊಹ್ಲಿ, ಕೇವಲ 93 ಎಸೆತಗಳಲ್ಲಿ ಶತಕ ಪೂರೈಸಿ ಅಬ್ಬರಿಸಿದರು. ಇದು ಅವರ ವೃತ್ತಿಜೀವನದ 54ನೇ ಏಕದಿನ ಶತಕ ಹಾಗೂ 85ನೇ ಅಂತರರಾಷ್ಟ್ರೀಯ ಶತಕವಾಗಿದೆ.
ವಿಶೇಷವೆಂದರೆ, ಈ ಹಿಂದೆ ಇಂದೋರ್ ಮೈದಾನದಲ್ಲಿ ಆಡಿದ್ದ 4 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಒಂದೂ ಅರ್ಧಶತಕ ಗಳಿಸಿರಲಿಲ್ಲ. ಆದರೆ ಈ ಬಾರಿ ಚೊಚ್ಚಲ ಶತಕ ಸಿಡಿಸುವ ಮೂಲಕ ಈ ಮೈದಾನದ ತಮ್ಮ ಹಿಂದಿನ ಕಳಪೆ ಫಾರ್ಮ್‌ಗೆ ವಿದಾಯ ಹೇಳಿದರು.
ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 7ನೇ ಶತಕ ಸಿಡಿಸಿದ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಮತ್ತು ರಿಕಿ ಪಾಂಟಿಂಗ್ (ತಲಾ 6 ಶತಕ) ಅವರ ದಾಖಲೆ ಮುರಿದರು.
ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕಿವೀಸ್ ವಿರುದ್ಧ ಒಟ್ಟು 10 ಶತಕ ಬಾರಿಸಿದ ಕೊಹ್ಲಿ, ಸಚಿನ್ ತೆಂಡೂಲ್ಕರ್, ಜೋ ರೂಟ್ ಮತ್ತು ಕಾಲಿಸ್ (ತಲಾ 9 ಶತಕ) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ತಂಡದ ವಿಕೆಟ್‌ಗಳು ಬೀಳುತ್ತಿದ್ದರೂ ಧೃತಿಗೆಡದ ಕೊಹ್ಲಿ ಅವರಿಗೆ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ (88 ರನ್ ಪಾಲುದಾರಿಕೆ) ಮತ್ತು ಅಂತಿಮ ಹಂತದಲ್ಲಿ ಹರ್ಷಿತ್ ರಾಣಾ ಉತ್ತಮ ಬೆಂಬಲ ನೀಡಿದರು. ಈ ಹಿಂದಿನ ಪಂದ್ಯದಲ್ಲಿ 93 ರನ್‌ಗಳಿಗೆ ಔಟಾಗಿದ್ದ ಕೊಹ್ಲಿ, ಈ ಬಾರಿ ಯಾವುದೇ ತಪ್ಪು ಮಾಡದೆ ಶತಕದ ಗಡಿ ದಾಟುವಲ್ಲಿ ಯಶಸ್ವಿಯಾದರು.


