January19, 2026
Monday, January 19, 2026
spot_img

ಟಿ20 ವಿಶ್ವಕಪ್‌ 2026 | ಪಂದ್ಯ ಶಿಫ್ಟ್ ಮಾಡೋ ಬಾಂಗ್ಲಾ ಪ್ಲಾನ್ ಫ್ಲಾಪ್: ಗುಂಪು ಬದಲಾವಣೆಗೆ NO ಎಂದ ಐರ್ಲೆಂಡ್

ಐಸಿಸಿ ಟಿ20 ವಿಶ್ವಕಪ್‌ 2026 ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತೆಗೆದುಕೊಂಡ ನಿರ್ಧಾರಗಳು ಈಗ ಒಂದರ ನಂತರ ಒಂದಾಗಿ ಹಿನ್ನಡೆಯಾಗಿ ಪರಿಣಮಿಸುತ್ತಿವೆ. ಭದ್ರತಾ ಕಾರಣಗಳನ್ನು ಮುಂದಿಟ್ಟು ಭಾರತದಲ್ಲಿ ನಡೆಯುವ ಪಂದ್ಯಗಳಿಗೆ ತಂಡವನ್ನು ಕಳುಹಿಸುವುದಿಲ್ಲ ಎಂದು ಬಿಸಿಬಿ ಐಸಿಸಿ (ICC)ಗೆ ಪತ್ರ ಬರೆದಿದ್ದರೂ, ಐಸಿಸಿ ಆ ಮನವಿಯನ್ನು ಅಂಗೀಕರಿಸಿಲ್ಲ. ಇದೀಗ ಬಾಂಗ್ಲಾದೇಶಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.

ಟಿ20 ವಿಶ್ವಕಪ್‌ 2026 ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಗ್ರೂಪ್ ಸಿಯಲ್ಲಿ ಸ್ಥಾನ ಪಡೆದಿದೆ. ಆರಂಭಿಕ ವೇಳಾಪಟ್ಟಿಯಂತೆ, ಗ್ರೂಪ್ ಹಂತದ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಬೇಕಾಗಿತ್ತು. ಆದರೆ ಭಾರತಕ್ಕೆ ಬರುವುದಿಲ್ಲ ಎಂಬ ನಿಲುವು ಮುಂದುವರಿಸಿದ ಬಿಸಿಬಿ, ಐಸಿಸಿಯ ಮುಂದೆ ಹೊಸ ಪ್ರಸ್ತಾವನೆ ಮುಂದಿಟ್ಟಿತ್ತು. ಗ್ರೂಪ್ ಬಿಯಲ್ಲಿರುವ ಐರ್ಲೆಂಡ್ ಜೊತೆ ಗುಂಪು ವಿನಿಮಯ ಮಾಡಿಕೊಳ್ಳಲು ಬಾಂಗ್ಲಾದೇಶ ಮನವಿ ಸಲ್ಲಿಸಿತ್ತು.

ಈ ಪ್ರಸ್ತಾವನೆಗೆ ಐರ್ಲೆಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟವಾಗಿ ನಿರಾಕರಣೆ ನೀಡಿದೆ. ಐಸಿಸಿ ಮೊದಲೇ ನಿಗದಿಪಡಿಸಿದ ವೇಳಾಪಟ್ಟಿಯಂತೆಲೇ ಪಂದ್ಯಗಳನ್ನು ಆಡಲಾಗುತ್ತದೆ ಎಂದು ಐರಿಶ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಐರ್ಲೆಂಡ್ ತನ್ನ ಎಲ್ಲಾ ಗುಂಪು ಹಂತದ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಐಸಿಸಿ ಭಾರತದಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸುವ ಭರವಸೆ ನೀಡಿದ್ದರೂ ಬಾಂಗ್ಲಾದೇಶ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಭಾರತಕ್ಕೆ ಬರದಿದ್ದರೆ ಬಾಂಗ್ಲಾದೇಶಕ್ಕೆ ಅಂಕ ನಷ್ಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳು ಟಿ20 ವಿಶ್ವಕಪ್‌ಗೂ ಮುನ್ನ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

Must Read

error: Content is protected !!