ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಲಹಂಕದ ಹಾರೋಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದ್ದು, ಇದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ಕೆರೆಯ ದಡದಲ್ಲಿ ಸುಮಾರು 12ಕ್ಕೂ ಹೆಚ್ಚು ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ. ಒಂದೇ ಜಾತಿಗೆ ಸೇರಿದ 12-18 ಇಂಚು ಉದ್ದದ ಮೀನುಗಳು ಸತ್ತಿರುವುದು ಕಂಡು ಬಂದಿದೆ. ಕೆರೆಯ ನೀರಿನಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿರುವುದು ಅಥವಾ ಮಾಲಿನ್ಯ ಕಾರಣವಾಗಿರಬಹುದು ಎಂದು ಪರಿಸರ ಕಾರ್ಯಕರ್ತರು ಹೇಳಿದ್ದು, ಈ ಕುರಿತು ತಕ್ಷಣ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಗ್ರೀನ್ ಸರ್ಕಲ್ ಸಂಸ್ಥೆಯ ಅಧ್ಯಕ್ಷ ವಿ. ಸೆಲ್ವರಾಜನ್ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೀನಿನ ಜಗತ್ತೇ ನೀರು, ಅದೇ ಕಲುಷಿತವಾಗಿಬಿಟ್ಟರೆ ಅದರ ಬದುಕೇ ನಾಶವಾಗುತ್ತದೆ. ಮುಂದೆ ಇಂಥ ಘಟನೆಗಳು ನಡೆಯಬಾರದು ಎಂದು ಪರಿಸರವಾದಿಗಳು ಮನವಿ ಮಾಡಿದ್ದಾರೆ.
ಇದು ಕಳವಳಕಾರಿ ಸಂಗತಿ. ಎರಡು ಸ್ಪಾಟ್-ಬಿಲ್ಲ್ಡ್ ಪೆಲಿಕನ್ ಹಕ್ಕಿಗಳೂ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದಕ್ಕೆ ಆಮ್ಲಜನಕದ ಕೊರತೆ ಒಂದು ಕಾರಣವಾಗಿರಬಹುದಾದರೂ, ಇಂತಹ ಘಟನೆಗಳು ಮರುಮರು ಸಂಭವಿಸುತ್ತಿರುವುದರಿಂದ ಸಮೀಪದ ನಿವಾಸ ಪ್ರದೇಶಗಳಿಂದ ಒಳಚರಂಡಿ ನೀರು ಕೆರೆಗೆ ಸೇರುತ್ತಿರಬಹುದೆಂಬ ಅನುಮಾನವಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಋತುಮಾನದ ಬದಲಾವಣೆಗಳ ಸಮಯದಲ್ಲಿ ಮೀನುಗಳ ಸಾವು ಸಾಮಾನ್ಯವಾಗಿದೆ ಎಂದು ಜಿಬಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನೀರಿನಲ್ಲಿ ಆಮ್ಲಜನಕದ ಮಟ್ಟವು ಸಾಮಾನ್ಯವಾಗಿ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಕಡಿಮೆಯಾಗುತ್ತದೆ, ಇದು ಕೆಲವೊಮ್ಮೆ ಮೀನುಗಳ ಸಾವಿಗೆ ಕಾರಣವಾಗುತ್ತದೆ. ಮಾಲಿನ್ಯವೇ ಕಾರಣವಾಗಿದ್ದರೆ, ಸತ್ತ ಮೀನುಗಳ ಸಂಖ್ಯೆ ಇನ್ನೂ ಹೆಚ್ಚಿರುತ್ತಿತ್ತು ಎಂದು ತಿಳಿಸಿದ್ದಾರೆ.


