ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಯ ವಿಚಾರಕ್ಕೆ ಯುವಕನೊಬ್ಬನ ಮೇಲೆ ನಡೆಸಲಾದ ಕ್ರೂರ ಹಲ್ಲೆ ಮಧ್ಯಪ್ರದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಭೋಪಾಲ್‌ನ ಕೋಲಾರ ಪ್ರದೇಶದ ನಿವಾಸಿ 18 ವರ್ಷದ ಸೋನು ಎಂಬ ಯುವಕನನ್ನು ರಾಜಸ್ಥಾನದ ಝಾಲಾವರ್ ಜಿಲ್ಲೆಗೆ ಕರೆಸಿ, ಅಪಹರಿಸಿ ಮೂರು ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸರ ಮಾಹಿತಿಯಂತೆ, ಸೋನು ಝಾಲಾವರ್ ಜಿಲ್ಲೆಯ ಪುಲೋರೋ ಗ್ರಾಮದ ಯುವತಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದ. ಸುಮಾರು ಎರಡು ವಾರಗಳ ಹಿಂದೆ ಆ ಯುವತಿ ಮನೆಬಿಟ್ಟು ಭೋಪಾಲ್‌ಗೆ ಬಂದು ಸೋನು ಜೊತೆ ವಾಸವಾಗಿದ್ದಳು. ಬಳಿಕ ಕುಟುಂಬದವರು ಆಕೆಯನ್ನು ಮನೆಗೆ ಕರೆದುಕೊಂಡು ಹೋದರು. ನಂತರ ಯುವತಿ ಸೋನುಗೆ ಕರೆ ಮಾಡಿ ಭೇಟಿಗೆ ಬರಲು ಹೇಳಿದ್ದಾಳೆ. ಆ ಮಾತನ್ನು ನಂಬಿ ರಾಜಸ್ಥಾನಕ್ಕೆ ತೆರಳಿದ ಸೋನು, ಗ್ರಾಮ ತಲುಪುತ್ತಿದ್ದಂತೆಯೇ ಯುವತಿಯ ಕುಟುಂಬದವರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆತನನ್ನು ಮನೆಯಲ್ಲಿ ಬಂಧಿಸಿ ಗಂಟೆಗಟ್ಟಲೆ ಥಳಿಸಲಾಗಿದ್ದು, ದೈಹಿಕ ಹಿಂಸೆಯ ಜೊತೆಗೆ ಮಾನಸಿಕವಾಗಿ ಅವಮಾನಿಸುವ ಉದ್ದೇಶದಿಂದ ಬಲವಂತವಾಗಿ ಮೂತ್ರ ಕುಡಿಯಲು ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ದೃಶ್ಯಗಳನ್ನು ವಿಡಿಯೋ ಮಾಡಿ ಸೋನು ಕುಟುಂಬಕ್ಕೆ ಕಳುಹಿಸಲಾಗಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಜಸ್ಥಾನ ಪೊಲೀಸರೊಂದಿಗೆ ತನಿಖೆ ಆರಂಭಿಸಿದ್ದಾರೆ. ಅಪಹರಣ, ಅಕ್ರಮ ಬಂಧನ, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕಲಂಗಳಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


