ಹೊಸದಿಗಂತ ಡಿಜಿಟಲ್ ಡೆಸ್ಕ್:
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಪುರಾತನ ಕಾಲದ ಕೊಡಲಿ ಆಕಾರದ ಅವಶೇಷವೊಂದು ಪತ್ತೆಯಾಗಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಶಿಲೆಯು ಮೂರು ಅಡಿ ಆಳದಲ್ಲಿ ದೊರಕಿದೆ. ಈ ಹಿಂದೆ ಉತ್ಖನನದ ಮೊದಲ ದಿನ ಶಿವಲಿಂಗ ಪಾಣಿಪೀಠ ಮತ್ತು ನಿನ್ನೆ ಶಿವಲಿಂಗ ಹಾಗೂ ನಾಗರ ಚಿತ್ರವಿರುವ ಅವಶೇಷಗಳು ಪತ್ತೆಯಾಗಿದ್ದವು.
ಲಕ್ಕುಂಡಿ ಗ್ರಾಮವು ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲದ ಸುಮಾರು 101 ದೇವಸ್ಥಾನಗಳು ಮತ್ತು 101 ಭಾವಿಗಳನ್ನು ಹೊಂದಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ.
ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ನಾಲ್ಕರಿಂದ ಐದು ಅಡಿ ಆಳದಲ್ಲಿ ಇನ್ನಷ್ಟು ಪ್ರಮುಖ ಅವಶೇಷಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದೊರೆತ ಕೊಡಲಿ ಆಕಾರದ ಅವಶೇಷವನ್ನು ಹೆಚ್ಚಿನ ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದ್ದು, ಅದರ ಕಾಲಮಾನ ಮತ್ತು ಮಹತ್ವದ ಬಗ್ಗೆ ತಜ್ಞರು ನಿರ್ಧರಿಸಲಿದ್ದಾರೆ.


