ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾ ಬಿಕ್ಕಟ್ಟಿನ ಪರಿಹಾರಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿರುವ ‘ಗಾಜಾ ಶಾಂತಿ ಮಂಡಳಿ’ ಪ್ರಸ್ತಾವನೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಕಾರಣ ಈ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ಹಣದ ಆಧಾರದ ಮೇಲೆ ನೀಡುವ ಯೋಜನೆ. ವರದಿಗಳ ಪ್ರಕಾರ, 1 ಬಿಲಿಯನ್ ಡಾಲರ್ ಕೊಡುಗೆ ನೀಡುವ ರಾಷ್ಟ್ರಗಳಿಗೆ ಶಾಶ್ವತ ಸದಸ್ಯತ್ವದ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ.
ಈ ಕ್ರಮವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಾದರಿಯಿಂದ ಸಂಪೂರ್ಣ ಭಿನ್ನವಾಗಿದ್ದು, ಜಾಗತಿಕ ಆಡಳಿತ ವ್ಯವಸ್ಥೆಯನ್ನು ‘ಹಣದ ಆಟ’ವಾಗಿಸುವ ಭೀತಿಯನ್ನು ಹುಟ್ಟುಹಾಕಿದೆ. ಬ್ಲೂಮ್ಬರ್ಗ್ ವರದಿಯಂತೆ, ಹಣಕಾಸಿನ ಕೊಡುಗೆ ನೀಡದ ದೇಶಗಳಿಗೆ ಮೂರು ವರ್ಷಗಳ ಕಾಲ ತಾತ್ಕಾಲಿಕ ಸದಸ್ಯತ್ವ ನೀಡುವ ಆಯ್ಕೆಯೂ ಇದೆ.
ಭಾರತ, ಪಾಕಿಸ್ತಾನ, ಇಟಲಿ, ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳಿಗೆ ಆಹ್ವಾನ ಕಳುಹಿಸಲಾಗಿರುವುದು ಈ ಮಂಡಳಿಯ ವ್ಯಾಪ್ತಿ ಗಾಜಾಕ್ಕೆ ಮಾತ್ರ ಸೀಮಿತವಲ್ಲ ಎಂಬ ಅನುಮಾನಕ್ಕೆ ಕಾರಣವಾಗಿದೆ. ಆಹ್ವಾನ ಪತ್ರಗಳಲ್ಲಿ UNSC ಅನುಮೋದನೆ ಉಲ್ಲೇಖಗೊಂಡಿದ್ದರೂ, ಪ್ರಾಯೋಗಿಕ ನಿರ್ಧಾರಗಳಿಗೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗುತ್ತಿದೆ ಎಂಬ ಟೀಕೆ ಕೇಳಿಬರುತ್ತಿದೆ.
ಟ್ರಂಪ್ ಬೆಂಬಲಿಗರು ಇದನ್ನು ವೇಗವಾಗಿ ನಿರ್ಧಾರ ಕೈಗೊಳ್ಳುವ ಪರಿಣಾಮಕಾರಿ ವ್ಯವಸ್ಥೆ ಎಂದು ಸಮರ್ಥಿಸಿಕೊಂಡಿದ್ದರೆ, ವಿಮರ್ಶಕರು ಇದನ್ನು ವಿಶ್ವಸಂಸ್ಥೆಯನ್ನು ಬದಿಗೊತ್ತುವ ಪ್ರಯತ್ನ ಎಂದು ಕರೆಯುತ್ತಿದ್ದಾರೆ. ಹಣದ ಆಧಾರದ ಮೇಲೆ ಶಕ್ತಿಯ ಸಮೀಕರಣ ನಿರ್ಮಾಣವಾದರೆ, ಭವಿಷ್ಯದ ಜಾಗತಿಕ ರಾಜಕೀಯ ಯಾವ ದಿಕ್ಕಿಗೆ ಸಾಗಲಿದೆ ಎಂಬ ಪ್ರಶ್ನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿದೆ.


