ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರಾಧ ಎಷ್ಟು ಜಾಣ್ಮೆಯಿಂದ ನಡೆದರೂ ಒಂದಾದರೂ ಸುಳಿವು ಬಿಟ್ಟು ಹೋಗುತ್ತದೆ ಎಂಬುದಕ್ಕೆ ಝಾನ್ಸಿಯಲ್ಲಿ ನಡೆದ ಈ ಪ್ರಕರಣ ಸ್ಪಷ್ಟ ಉದಾಹರಣೆ ಆಗಿದೆ. ಮಹಿಳೆಯನ್ನು ಹತ್ಯೆ ಮಾಡಿ, ದೇಹವನ್ನು ಸುಟ್ಟು, ಚಿತಾಭಸ್ಮವನ್ನು ನದಿಗೆ ಎಸೆದಿದ್ದರೂ ಕೊನೆಗೂ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ನಿವೃತ್ತ ರೈಲ್ವೆ ಸಿಬ್ಬಂದಿ ರಾಮ್ ಸಿಂಗ್ ತನ್ನ ಲಿವ್-ಇನ್ ಸಂಗಾತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಈಗಾಗಲೇ ಇಬ್ಬರು ಪತ್ನಿಯರಿರುವ ರಾಮ್ ಸಿಂಗ್, ಮೂರನೇ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಜನವರಿ 8ರಂದು ಮಹಿಳೆಯನ್ನು ಕೊಲೆ ಮಾಡಿದ ಬಳಿಕ, ಶವವನ್ನು ಟಾರ್ಪಲ್‌ನಲ್ಲಿ ಸುತ್ತಿ ಕೆಲಕಾಲ ಮರೆಮಾಡಿದ್ದಾನೆ. ನಂತರ ನೀಲಿ ಬಣ್ಣದ ಲೋಹದ ಟ್ರಂಕ್ ಖರೀದಿಸಿ, ಅದರೊಳಗೆ ಶವವಿಟ್ಟು ಬೆಂಕಿ ಹಚ್ಚಿದ್ದಾನೆ.
ಶವ ಸಂಪೂರ್ಣವಾಗಿ ಸುಟ್ಟ ಬಳಿಕ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಚಿತಾಭಸ್ಮವನ್ನು ನದಿಗೆ ಎಸೆದಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಟ್ರಂಕ್ ಅನ್ನು ಆರೋಪಿಯು ತನ್ನ ಮಗನ ಸಹಾಯದಿಂದ ಬಾಡಿಗೆ ಲೋಡರ್ ವಾಹನದಲ್ಲಿ ಎರಡನೇ ಪತ್ನಿಯ ಮನೆಗೆ ಕಳುಹಿಸಿದ್ದ. ಸಾಗಣೆ ವೇಳೆ ಪೆಟ್ಟಿಗೆಯಿಂದ ದ್ರವ ಸೋರಿಕೆಯಾದುದನ್ನು ಗಮನಿಸಿದ ಲೋಡರ್ ಚಾಲಕ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪೊಲೀಸರು ಸ್ಥಳಕ್ಕೆ ತೆರಳಿ ಟ್ರಂಕ್ ತೆರೆದಾಗ, ಒಳಗೆ ಸುಟ್ಟ ಮಾನವ ಮೂಳೆಗಳು ಮತ್ತು ಕಲ್ಲಿದ್ದಲು ಮುಂತಾದ ವಸ್ತುಗಳು ಪತ್ತೆಯಾಗಿವೆ. ಅವಶೇಷಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಹಣದ ವಿಚಾರದಲ್ಲಿ ಜಗಳವಾಗಿದ್ದು, ಅದೇ ಕೊಲೆಗೆ ಕಾರಣ ಎಂದು ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.


