January19, 2026
Monday, January 19, 2026
spot_img

ಕರ್ನಾಟಕ ಧ್ವಜಕ್ಕೆ ಅಪಮಾನ ಮಾಡಿದ್ದ ತಮಿಳುನಾಡಿನ ಸಿಲಂಬರಸನ್ ಬಂಧನ, ಕ್ಷಮೆ ಕೇಳಿದ ಆರೋಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಈರೋಡ್ ಮೂಲದ ಸಿಲಂಬರಸನ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಟಿಟಿ ವಾಹನದ ಮೇಲೆ ಕರ್ನಾಟಕ ಧ್ವಜವಿತ್ತು ಎಂಬ ಒಂದೇ ಕಾರಣಕ್ಕೆ ಆ ವಾಹನ ನಿಲ್ಲಿಸಿ ತಮಿಳುನಾಡಿನ ಈರೋಡ್ ನಿವಾಸಿ ಸಿಲಂಬರಸನ್ ಗಲಾಟೆ ಮಾಡಿದ್ದ. ಬಳಿಕ ವಾಹನದ ಮೇಲಿದ್ದ ಧ್ವಜವನ್ನು ಬಲವಂತವಾಗಿ ತೆಗೆಸಿದ್ದ. ಬಳಿಕ ಆ ಧ್ವಜವನ್ನು ಕಾಲಿನಿಂದ ತುಳಿದು ಅಪಮಾನಿಸಿದ್ದ.

ಅವನ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಈತನ ಈ ಕೃತ್ಯಕ್ಕೆ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊಬೈಲ್ ಲೊಕೇಶನ್ ಆಧಾರದ ಮೇಲೆ ತಮಿಳುನಾಡಿನ ಈರೋಡ್‌ನಲ್ಲಿ ಈತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ತಮಿಳುನಾಡಿನ ಈ ರೋಡ್ ನ ಪೋಲಿಸ್ ವರಿಷ್ಠಾದಿಕಾರಿ ಸುಜಾತರವರ ಆದೇಶದ ಮೇರೆಗೆ ಇಂದು ಸಿಲಂಬರಸನ್ ಮತ್ತು ಅಬ್ದುಲ್ ಮಲ್ಲಿಕ್ ಎಂಬುವವರನ್ನು ಪೋಲಿಸರು ಬಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಆರೋಪಿಯನ್ನು ಬೆಂಗಳೂರಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ರಾಜ್ಯದ ಲಾಂಛನ ಅಥವಾ ಧ್ವಜಕ್ಕೆ ಅವಮಾನ ಮಾಡುವುದು ಕಾನೂನುಬಾಹಿರವಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

Must Read