ಒಂದು ಸಂಬಂಧ ಅಂದ್ರೆ ಕೇವಲ ಜೊತೆಯಾಗಿರುವುದು ಮಾತ್ರವಲ್ಲ; ಅದು ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ಗೌರವ ಮತ್ತು ನಂಬಿಕೆಯ ಮೇಲೆ ಕಟ್ಟಿದ ಸೇತುವೆ. ಆರಂಭದಲ್ಲಿ ಬಲವಾಗಿ ಕಾಣಿಸುವ ಅನೇಕ ಸಂಬಂಧಗಳು ಸಮಯದೊಂದಿಗೆ ನಿಧಾನವಾಗಿ ಬಿರುಕು ಬಿಡುತ್ತವೆ. ಕಾರಣ ದೊಡ್ಡ ದ್ರೋಹಗಳು ಅಲ್ಲ, ಬದಲಾಗಿ ದಿನನಿತ್ಯದ ಸಣ್ಣಸಣ್ಣ ಅಭ್ಯಾಸಗಳು. ನಾವು ಗಮನಿಸದೇ ಮಾಡುವ ಕೆಲವು ನಡೆಗಳು ನಮ್ಮ ಪ್ರೀತಿಪಾತ್ರರೊಂದಿಗೆ ಇರುವ ನಂಟನ್ನು ಹಾಳುಮಾಡುತ್ತಿರುತ್ತವೆ. ಸಂಬಂಧ ಉಳಿಸಿಕೊಳ್ಳಬೇಕು ಎಂಬ ಮನಸ್ಸಿದ್ದರೆ, ಮೊದಲು ಇಂತಹ ತಪ್ಪುಗಳನ್ನು ಗುರುತಿಸುವುದು ಅತ್ಯಂತ ಅಗತ್ಯ.
ಹೇಳದೇ ಇಡುವ ನಿರೀಕ್ಷೆಗಳು:
ಮನಸ್ಸಿನಲ್ಲೇ ನಿರೀಕ್ಷೆಗಳನ್ನು ಕಟ್ಟಿಕೊಂಡು, ಅದನ್ನು ವ್ಯಕ್ತಪಡಿಸದೇ ಇರುವುದೇ ಅನೇಕ ಸಂಬಂಧಗಳ ಮೊದಲ ಬಿರುಕು. ಎದುರಿನವರು ಎಲ್ಲವನ್ನೂ ತಾನಾಗಿಯೇ ಅರ್ಥಮಾಡಿಕೊಳ್ಳುತ್ತಾರೆ ಎಂಬ ಭಾವನೆ ನಿರಾಶೆ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತದೆ.
ಯಾವಾಗಲೂ ನಾನೇ ಸರಿ ಎನ್ನುವ ಹಠ:
ಪ್ರತಿ ಚರ್ಚೆಯಲ್ಲೂ ತಾನು ಸರಿ ಎಂದು ಸಾಬೀತುಪಡಿಸುವ ಹಠ ಸಂಬಂಧವನ್ನು ಸ್ಪರ್ಧೆಯಾಗಿ ಮಾಡುತ್ತದೆ. ಅರ್ಥಮಾಡಿಕೊಳ್ಳುವ ಬದಲು ಗೆಲ್ಲಬೇಕು ಎಂಬ ಮನಸ್ಥಿತಿ ಬಂದಾಗ, ಪ್ರೀತಿ ನಿಧಾನವಾಗಿ ದೂರವಾಗುತ್ತದೆ.
ನಿರ್ಲಕ್ಷ್ಯ ಮತ್ತು ಭಾವನಾತ್ಮಕ ದೂರ:
ಒಬ್ಬರ ಸಮಸ್ಯೆಗಳಿಗೆ ಸ್ಪಂದಿಸದೇ, ಭಾವನೆಗಳನ್ನು ಕಡೆಗಣಿಸುವುದು ಸಂಬಂಧದಲ್ಲಿ ಅಂತರವನ್ನು ಹೆಚ್ಚಿಸುತ್ತದೆ. ಕೇಳದ ಕಿವಿ ಮತ್ತು ಕಾಣದ ಕಾಳಜಿ, ಮೌನವಾದ ನೋವಿಗೆ ಕಾರಣವಾಗುತ್ತದೆ.
ಹಳೆಯ ತಪ್ಪುಗಳನ್ನು ಮರುಕಳಿಸುವುದು:
ಸಣ್ಣ ಜಗಳಕ್ಕೆ ಹಳೆಯ ತಪ್ಪುಗಳ ಪಟ್ಟಿ ತೆಗೆಯುವುದು ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ಅದು ಗಾಯಗಳನ್ನು ಮತ್ತಷ್ಟು ಆಳಗೊಳಿಸಿ ಸಂಬಂಧವನ್ನು ದುರ್ಬಲಗೊಳಿಸುತ್ತದೆ.
‘ನನ್ನಂತೆಯೇ ಇರಬೇಕು’ ಎನ್ನುವ ಮನಸ್ಥಿತಿ:
ಸಂಗಾತಿಯನ್ನು ತನ್ನಂತೆಯೇ ರೂಪಿಸಬೇಕೆಂಬ ಒತ್ತಡ ಸಂಬಂಧದ ಸ್ವಾಭಾವಿಕತೆಯನ್ನು ಕಳೆದುಹೋಗುವಂತೆ ಮಾಡುತ್ತದೆ. acceptance ಇಲ್ಲದ ಜಾಗದಲ್ಲಿ ಪ್ರೀತಿ ಉಸಿರಾಡಲು ಕಷ್ಟವಾಗುತ್ತದೆ.


