ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕೋಳಿ ಸಾಕಾಣಿಕೆ ರೈತರು ಮತ್ತು ಬ್ರಾಯ್ಲರ್ ಕಂಪನಿಗಳ ನಡುವಿನ ಹಗ್ಗಜಗ್ಗಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದಕ್ಷಿಣ ಭಾರತದಾದ್ಯಂತ ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಸಾಕಾಣಿಕೆ ದರ ಪರಿಷ್ಕರಣೆಗೆ ಒತ್ತಾಯಿಸಿ ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಜನವರಿ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಕೋಳಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ.
ತಮಿಳುನಾಡಿನ ಪಲ್ಲಡಂ, ತಿರುಪ್ಪೂರ್, ಈರೋಡ್ ಮತ್ತು ಕೊಯಮತ್ತೂರು ಭಾಗದ ಸಾವಿರಾರು ರೈತರು ಖಾಸಗಿ ಬ್ರಾಯ್ಲರ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ರೈತರ ಪ್ರಕಾರ, ಕಳೆದ 5-6 ವರ್ಷಗಳಿಂದ ಕಂಪನಿಗಳು ರೈತರಿಗೆ ನೀಡುವ ಪ್ರತಿ ಕೆಜಿ ಕೋಳಿಯ ಸಾಕಾಣಿಕೆ ದರ ಕೇವಲ 6.5 ರೂ.ನಷ್ಟಿದೆ. ಆದರೆ, ಈ ಅವಧಿಯಲ್ಲಿ ವಿದ್ಯುತ್ ದರ, ಕಾರ್ಮಿಕರ ವೆಚ್ಚ ಮತ್ತು ನಿರ್ವಹಣಾ ವೆಚ್ಚಗಳು ದುಪ್ಪಟ್ಟಾಗಿವೆ.
ಫಾರಂಗಳಲ್ಲಿ ಬಳಸುವ ತೆಂಗಿನ ನಾರಿನ ಬೆಲೆ ಪ್ರತಿ ಟ್ರ್ಯಾಕ್ಟರ್ ಲೋಡ್‌ಗೆ ಹಿಂದೆ 3,000 ರೂ. ಇದ್ದದ್ದು ಈಗ 22,000 ರೂ.ಗೆ ಏರಿಕೆಯಾಗಿದೆ. ಹೀಗಾಗಿ, ಸಾಕಣೆದಾರರು ಬ್ರಾಯ್ಲರ್ ಕೋಳಿಗೆ ಪ್ರತಿ ಕೆಜಿಗೆ 20 ರೂ., ನಾಟಿ ಕೋಳಿಗೆ 25 ರೂ. ಮತ್ತು ಕೌಜಗ ಹಕ್ಕಿಗೆ 7 ರೂ. ದರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.


