ಹೊಸದಿಗಂತ ಡಿಜಿಟಲ್ ಡೆಸ್ಕ್:
ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ 10 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
2017 ರ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಶಾಸಕನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ವಾರಗಳ ನಂತರ ಈ ತಿರಸ್ಕಾರ ಬಂದಿದೆ.
ಇಂದು ನ್ಯಾಯಾಲಯದ ತೀರ್ಪನ್ನು ಓದಿದ ನ್ಯಾಯಮೂರ್ತಿ ರವೀಂದರ್ ದುಡೇಜಾ, ಸೆಂಗಾರ್ ತನ್ನ ಅಪರಾಧ ಸಾಬೀತನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸೂಕ್ತ ಸಮಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
2019 ರ ವಿಚಾರಣಾ ನ್ಯಾಯಾಲಯದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತಿರುವುದರಿಂದ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಸೆಂಗಾರ್ ಮನವಿ ಮಾಡಿದ್ದರು.
ಮಾರ್ಚ್ 13, 2020 ರಂದು, ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಸೆಂಗಾರ್‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿತ್ತು. ಕಸ್ಟಡಿ ಸಾವಿನಲ್ಲಿ ಭಾಗಿಯಾಗಿದ್ದಕ್ಕಾಗಿ ಸೆಂಗಾರ್ ಅವರ ಸಹೋದರ ಅತುಲ್ ಸಿಂಗ್ ಸೆಂಗಾರ್ ಮತ್ತು ಇತರ ಐವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಕಳೆದ ತಿಂಗಳು ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ನೀಡಿದ್ದ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ನೀಡಿದ್ದ ಆದೇಶವನ್ನು ತಡೆಹಿಡಿದಿದೆ. ಇದರಿಂದಾಗಿ ಸೆಂಗಾರ್ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ.


