ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ದೈನಂದಿನ ಗೋಳಾಗಿದ್ದ ಸಾದಹಳ್ಳಿ ಜಂಕ್ಷನ್‌ನ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಹೆಬ್ಬಾಳದಿಂದ ಏರ್‌ಪೋರ್ಟ್‌ವರೆಗಿನ ಮಾರ್ಗವನ್ನು ಸಂಪೂರ್ಣವಾಗಿ ಸಿಗ್ನಲ್ ಮುಕ್ತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭರ್ಜರಿ ಪ್ಲಾನ್ ಮಾಡಿದೆ.
ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಅತಿದೊಡ್ಡ ಅಡೆತಡೆಯಾಗಿದ್ದ ಸಾದಹಳ್ಳಿ ಜಂಕ್ಷನ್ ಸಿಗ್ನಲ್ ಅನ್ನು ಈಗ ತೆಗೆದುಹಾಕಲಾಗುತ್ತಿದೆ. ಇಲ್ಲಿ 35 ಕೋಟಿ ರೂ. ವೆಚ್ಚದಲ್ಲಿ 750 ಮೀಟರ್ ಉದ್ದದ, ಆರು ಪಥಗಳ ಬೃಹತ್ ಅಂಡರ್‌ಪಾಸ್ ನಿರ್ಮಾಣಕ್ಕೆ NHAI ಪ್ರಧಾನ ಕಚೇರಿ ಅನುಮೋದನೆ ನೀಡಿದೆ. ಈ ಕಾಮಗಾರಿಯು ಫೆಬ್ರವರಿ ತಿಂಗಳಿನಿಂದ ಅಧಿಕೃತವಾಗಿ ಆರಂಭವಾಗುವ ನಿರೀಕ್ಷೆಯಿದೆ.
ವಾಸ್ತವವಾಗಿ ಈ ಯೋಜನೆ ಒಂದು ದಶಕದ ಹಿಂದೆಯೇ ಸಿದ್ಧವಾಗಿತ್ತು. 2019ರಲ್ಲಿ ಕಾಮಗಾರಿ ಆರಂಭವಾದರೂ, ವಿನ್ಯಾಸದಲ್ಲಿನ ಬದಲಾವಣೆ ಹಾಗೂ ಮ್ಯಾಪಿಂಗ್ ಕಾರಣಗಳಿಂದ ಯೋಜನೆ ವಿಳಂಬವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಕೆಲಸಕ್ಕೆ ವೇಗ ಸಿಕ್ಕಿದೆ.
ಬರಿ ಸಾದಹಳ್ಳಿ ಮಾತ್ರವಲ್ಲದೆ, ಯಲಹಂಕ ವಾಯುಪಡೆ ನಿಲ್ದಾಣದ ಬಳಿಯೂ 70 ಕೋಟಿ ರೂ. ವೆಚ್ಚದಲ್ಲಿ 1 ಕಿ.ಮೀ ಉದ್ದದ ಸರ್ವಿಸ್ ರಸ್ತೆಯನ್ನು ‘ಕಟ್-ಅಂಡ್-ಕವರ್’ ವಿಧಾನದ ಮೂಲಕ ನಿರ್ಮಿಸಲಾಗುತ್ತಿದೆ. ಹೆಬ್ಬಾಳ ಫ್ಲೈಓವರ್ ಬಳಿಯ ಸರ್ವಿಸ್ ರಸ್ತೆಗಳ ಅಗಲೀಕರಣ ಮತ್ತು ಜಕ್ಕೂರು ಏರೋಡ್ರೋಮ್ ಬಳಿಯ ರಸ್ತೆ ನವೀಕರಣಗೊಂಡರೆ, ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ತಲುಪುವ ಅವಧಿ ಗಣನೀಯವಾಗಿ ಇಳಿಕೆಯಾಗಲಿದೆ.
ಅಂಡರ್‌ಪಾಸ್ ನಿರ್ಮಾಣ ಕಾರ್ಯ ನಡೆಯುವ ಕಾರಣ ಸಾದಹಳ್ಳಿ ಜಂಕ್ಷನ್‌ನಲ್ಲಿ ಮುಂದಿನ ಎರಡು ವರ್ಷಗಳ ಕಾಲ ಸಂಚಾರ ನಿರ್ಬಂಧವಿರಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರಸ್ತೆಯ ಎರಡೂ ಬದಿಗಳಲ್ಲಿ ದ್ವಿಪಥ ಸರ್ವಿಸ್ ರಸ್ತೆಗಳನ್ನು ವಿಸ್ತರಿಸಲಾಗುತ್ತಿದೆ. ಸ್ಥಳೀಯ ಗ್ರಾಮಗಳಾದ ಸಾದಹಳ್ಳಿ, ಚೌಡೇನಹಳ್ಳಿ, ಚನ್ನಹಳ್ಳಿ ಹಾಗೂ ಗಡೇನಹಳ್ಳಿಯ ನಿವಾಸಿಗಳ ಸುಗಮ ಸಂಚಾರಕ್ಕಾಗಿ ವಿಶೇಷ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಸಹ ನಿರ್ಮಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಈ ಯೋಜನೆಗಳು ಪೂರ್ಣಗೊಂಡ ನಂತರ, ಬೆಂಗಳೂರಿನ ಬಳ್ಳಾರಿ ರಸ್ತೆಯು ಯಾವುದೇ ಅಡೆತಡೆಯಿಲ್ಲದ, ಅತ್ಯಂತ ವೇಗದ ಸಂಚಾರ ಕಾರಿಡಾರ್ ಆಗಿ ಹೊರಹೊಮ್ಮಲಿದೆ.


