ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಜೊತೆಗಿನ ಆಕ್ಷೇಪಾರ್ಹ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ. “ಇದು ಸಂಪೂರ್ಣವಾಗಿ ಎಡಿಟ್ ಮಾಡಲಾದ ತಿರುಚಿದ ವಿಡಿಯೋ” ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ವಿವರಣೆ ನೀಡಲು ರಾಮಚಂದ್ರ ರಾವ್ ಇಂದು ಗೃಹ ಸಚಿವರ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗೂ ನನಗೂ ಸಂಬಂಧವಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ನನ್ನ ಗೌರವಕ್ಕೆ ಧಕ್ಕೆ ತರಲು ಈ ರೀತಿ ಮಾಡಲಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ವಕೀಲರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ,” ಎಂದು ತಿಳಿಸಿದರು.
ವಿಡಿಯೋ ಹಗರಣವು ಸರ್ಕಾರಕ್ಕೆ ಮುಜುಗರ ತಂದಿರುವ ಹಿನ್ನೆಲೆಯಲ್ಲಿ, ಗೃಹ ಸಚಿವರು ಡಿಜಿಪಿ ರಾಮಚಂದ್ರ ರಾವ್ ಅವರನ್ನು ಭೇಟಿ ಮಾಡಲು ನಿರಾಕರಿಸಿದರು. ಸಚಿವರ ಕಚೇರಿಗೆ ಆಗಮಿಸಿದ ಅಧಿಕಾರಿಗೆ ಸಿಬ್ಬಂದಿಯ ಮೂಲಕ “ಭೇಟಿ ಸಾಧ್ಯವಿಲ್ಲ” ಎಂಬ ಸಂದೇಶ ರವಾನಿಸಲಾಯಿತು. ಇದರಿಂದಾಗಿ ಕೇವಲ ಐದೇ ನಿಮಿಷದಲ್ಲಿ ಡಿಜಿಪಿಯವರು ಅಲ್ಲಿಂದ ನಿರ್ಗಮಿಸಬೇಕಾಯಿತು.
ಈ ಬೆಳವಣಿಗೆಯು ಪೊಲೀಸ್ ಇಲಾಖೆಯಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ತನಿಖೆ ಯಾವ ಹಂತಕ್ಕೆ ತಲುಪಲಿದೆ ಎಂಬ ಕುತೂಹಲ ಮೂಡಿಸಿದೆ.



