ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಆರು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 17 ರಂದು ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ದಿಲೀಪ್ ಬೆಡ್ಜಾ ಸೇರಿದಂತೆ ಆರು ನಕ್ಸಲರು ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್ಟೇಬಲ್ಗಳಾದ ನೀರಜ್ ಶರ್ಮಾ ಮತ್ತು ಕೃಷ್ಣ ನೇತಮ್ ಎಂಬ ಇಬ್ಬರು ಸೈನಿಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಪ್ರಸ್ತುತ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಬಿಜಾಪುರ ಎಸ್ಪಿ ಡಾ. ಜಿತೇಂದ್ರ ಯಾದವ್, ಜ.17ರಂದು ಪ್ರಾರಂಭವಾದ ನಕ್ಸಲರ ಎನ್ಕೌಂಟರ್ ಜ.18ರವರೆಗೆ ನಡೆಯಿತು. ಡಿಆರ್‌ಜಿ ಬಿಜಾಪುರ, ಡಿಆರ್‌ಜಿ ದಂತೇವಾಡ, ಎಸ್‌ಟಿಎಫ್, ಕೋಬ್ರಾ ಬೆಟಾಲಿಯನ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಈ ನಕ್ಸಲ್ ಕಾರ್ಯಾಚರಣೆಗೆ ಮುಂದಾಗಿದ್ದವು. ಸದ್ಯ ಎನ್ಕೌಂಟರ್ ಸ್ಥಳದಿಂದ ಆರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ನಾಲ್ವರು ಮಹಿಳಾ ನಕ್ಸಲರು ಮತ್ತು ಇಬ್ಬರು ಪುರುಷ ನಕ್ಸಲರು ಸೇರಿದ್ದಾರೆ. ಆ ಪ್ರದೇಶದಿಂದ ಎರಡು ಎಕೆ-47 ರೈಫಲ್‌ಗಳು, ಮೂರು ಮ್ಯಾಗ್ಜೀನ್ಗಳು ಮತ್ತು 32 ಸುತ್ತು ಮದ್ದುಗುಂಡುಗಳು ಸೇರಿದಂತೆ ಇತರೆ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ಇನ್ನೂ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ನಕ್ಸಲರ ವಿರುದ್ಧ ಕ್ರಮ ಮುಂದುವರಿಯಲಿದೆ.
ಈ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ಹಾಗೂ ರಾಷ್ಟ್ರೀಯ ಉದ್ಯಾನ ಪ್ರದೇಶ ಸಮಿತಿಯ ಉಸ್ತುವಾರಿ (ಡಿವಿಸಿಎಂ) ದಿಲೀಪ್ ಬೆಡ್ಜಾ ಕೂಡ ಹತನಾಗಿದ್ದು, ಈತನ ತಲೆಗೆ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಇದಲ್ಲದೆ, ಬಹುಮಾನ ಘೋಷಿತ ನಕ್ಸಲರಾದ ಮಾದ್ವಿ ಕೋಸಾ (₹5 ಲಕ್ಷ), ಪಾಲೋ ಪೋಡಿಯಂ (₹5 ಲಕ್ಷ), ಲಕ್ಷ್ಮಿ ಮಡ್ಕಮ್ (₹5 ಲಕ್ಷ), ಜುಗ್ಲೋ ಬಂಜಮ್ (₹2ಲಕ್ಷ) ಮತ್ತು ರಾಧಾ ಮೆಟ್ಟಾ (₹2ಲಕ್ಷ) ಎಂಬುವರು ಕೂಡ ಈ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ ಎಂದು ಹೇಳಿದರು.


