ಹೊಸದಿಗಂತ ಬೆಳಗಾವಿ:
ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರರಾವ್ ಅವರ ಮಹಿಳೆಯರೊಂದಿಗಿನ ಅನುಚಿತ ವರ್ತನೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಅಧಿಕಾರ ಎಷ್ಟೇ ಉನ್ನತ ಮಟ್ಟದ್ದಾಗಿರಲಿ, ಯಾರೂ ಕೂಡ ಕಾನೂನಿಗಿಂತ ಮಿಗಿಲಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತ,” ಎಂದು ಗುಡುಗಿದ್ದಾರೆ.
ಇದೇ ಸಂದರ್ಭದಲ್ಲಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂಬ ಶಾಸಕ ಜನಾರ್ದನ ರೆಡ್ಡಿ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ, “ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದು ಜೈಲು ಪಾಲಾದವರಿಗೆ ನಮ್ಮನ್ನು ಟೀಕಿಸುವ ಯಾವ ನೈತಿಕ ಹಕ್ಕೂ ಇಲ್ಲ. ಅವರ ವಿರುದ್ಧದ ಪ್ರಕರಣಗಳು ಇಂದಿಗೂ ಸುಪ್ರೀಂ ಕೋರ್ಟ್‌ನಲ್ಲಿವೆ,” ಎಂದು ನೆನಪಿಸಿದರು.
ವಿರೋಧ ಪಕ್ಷಗಳು ಕೇವಲ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕರ ದಾರಿ ತಪ್ಪಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜನವರಿ 22ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಬಂದು ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು. ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ಸದನದಲ್ಲಿ ಸತ್ಯಾಸತ್ಯತೆಗಳ ಮೇಲೆ ಮಾತನಾಡಲಿ ಎಂದು ಕಿವಿಮಾತು ಹೇಳಿದರು.


