January19, 2026
Monday, January 19, 2026
spot_img

SSLC ಪರೀಕ್ಷೆಯಲ್ಲಿ ಹೈಟೆಕ್ ಕಣ್ಗಾವಲು: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ‘ಮಾಸ್ಟರ್ ಪ್ಲಾನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಶಿಕ್ಷಣ ಇಲಾಖೆ, ಮುಂಬರುವ ಮುಖ್ಯ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪರೀಕ್ಷಾ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಶಿಕ್ಷಕರಿಗೂ ಮೊಬೈಲ್ ನೋ ಎಂಟ್ರಿ: ಈ ಮೊದಲು ವಿದ್ಯಾರ್ಥಿಗಳಿಗೆ ಮಾತ್ರ ಮೊಬೈಲ್ ನಿರ್ಬಂಧವಿತ್ತು. ಆದರೆ ಈಗ ಪರೀಕ್ಷಾ ಕೇಂದ್ರದೊಳಗೆ ಶಿಕ್ಷಕರು ಮತ್ತು ಸಿಬ್ಬಂದಿಗಳು ಸಹ ಮೊಬೈಲ್ ಬಳಸುವಂತಿಲ್ಲ.

ಇನ್ಮುಂದೆ 2ನೇ ಮತ್ತು 3ನೇ ಪರೀಕ್ಷೆಗಳು ನೇರವಾಗಿ ಆಯುಕ್ತರ ನೇತೃತ್ವದಲ್ಲಿ ನಡೆಯಲಿವೆ. ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದೆ.

ಪ್ರಶ್ನೆಪತ್ರಿಕೆಗಳನ್ನು ಮುಖ್ಯೋಪಾಧ್ಯಾಯರೇ ಸ್ವತಃ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಅದರ ಗೌಪ್ಯತೆಯನ್ನು ಕಾಪಾಡುವುದು ಅವರ ಜವಾಬ್ದಾರಿಯಾಗಿರುತ್ತದೆ.

ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಯಾವುದೇ ಅಕ್ರಮ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಕಾಲೇಜು ಪ್ರಾಂಶುಪಾಲರು ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಿದ್ದಾರೆ.

ಕಳೆದ ಜನವರಿ 6ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಪರೀಕ್ಷೆಗೂ ಮೂರು ಗಂಟೆ ಮುಂಚಿತವಾಗಿಯೇ ಸೋರಿಕೆಯಾಗಿತ್ತು. ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಈ ಅಕ್ರಮ ನಡೆದಿರುವುದು ಪತ್ತೆಯಾಗಿತ್ತು. ಅಚ್ಚರಿಯ ವಿಷಯವೆಂದರೆ, ಪ್ರಶ್ನೆಪತ್ರಿಕೆ ಮಾರಾಟ ಮಾಡಲು ‘ಡೆಲ್ಟಾ ಹ್ಯಾಕರ್ 32’ ನಂತಹ ಇನ್‌ಸ್ಟಾಗ್ರಾಂ ಖಾತೆಗಳನ್ನು ಬಳಸಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ 6 ಶಿಕ್ಷಕರು ಮತ್ತು 10 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ.

Must Read