ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರಾ ಗೌಡ ಅವರಿಗೆ ಈಗ ಮನೆ ಊಟ ಪಡೆಯುವುದು ಅಗ್ನಿಪರೀಕ್ಷೆಯಂತಾಗಿದೆ. ವಾರಕ್ಕೊಮ್ಮೆ ಮನೆ ಊಟ ನೀಡಬೇಕೆಂಬ ಕೆಳಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಈಗ ರಾಜ್ಯ ಸರ್ಕಾರವೇ ಹೈಕೋರ್ಟ್ ಮೆಟ್ಟಿಲೇರಿದೆ.
ಕೊಲೆ ಪ್ರಕರಣದಂತಹ ಗಂಭೀರ ಆರೋಪ ಎದುರಿಸುತ್ತಿರುವ ಕೈದಿಗಳಿಗೆ ಮನೆ ಊಟ ನೀಡುವ ಯಾವುದೇ ವಿಶೇಷ ಸೌಲಭ್ಯ ಕಾನೂನಿನಲ್ಲಿಲ್ಲ. ಒಂದು ವೇಳೆ ಪವಿತ್ರಾ ಗೌಡ ಅವರಿಗೆ ಈ ಅವಕಾಶ ನೀಡಿದರೆ, ಜೈಲಿನಲ್ಲಿರುವ ಇತರ ಸಾವಿರಾರು ಆರೋಪಿಗಳು ಇದೇ ಬೇಡಿಕೆಯನ್ನು ಮುಂದಿಡಬಹುದು ಎಂಬುದು ಸರ್ಕಾರದ ಆತಂಕ.
ಅಲ್ಲದೆ, ಪರಪ್ಪನ ಅಗ್ರಹಾರ ಜೈಲಿನ ಊಟಕ್ಕೆ FSSAI ನಿಂದ 4 ಸ್ಟಾರ್ ರೇಟಿಂಗ್ ಸಿಕ್ಕಿದೆ. ಗುಣಮಟ್ಟದ ಆಹಾರ ಸಿಗುತ್ತಿರುವಾಗ ವಿಶೇಷ ಸವಲತ್ತು ಅನಗತ್ಯ ಎಂಬುದು ಜೈಲಧಿಕಾರಿಗಳ ವಾದ.
ಜೈಲಿನ ಊಟ ಸೇವಿಸುವುದರಿಂದ ತನಗೆ ಚರ್ಮರೋಗ ಉಂಟಾಗುತ್ತಿದೆ, ಮೈಮೇಲೆ ಗುಳ್ಳೆಗಳಾಗುತ್ತಿವೆ ಮತ್ತು ಆಹಾರ ವಿಷಪೂರಿತವಾಗುತ್ತಿದೆ ಎಂದು ಪವಿತ್ರಾ ಗೌಡ ಈ ಹಿಂದೆ ಕೋರ್ಟ್ನಲ್ಲಿ ಅಲವತ್ತುಕೊಂಡಿದ್ದರು. ಅವರ ಮನವಿ ಆಲಿಸಿದ್ದ 57ನೇ ಸಿಸಿಹೆಚ್ ಕೋರ್ಟ್, ಮಾನವೀಯ ನೆಲೆಯಲ್ಲಿ ವಾರಕ್ಕೊಮ್ಮೆ ಮನೆ ಊಟಕ್ಕೆ ಅನುಮತಿ ನೀಡಿತ್ತು. ಆದರೆ ಈಗ ಸರ್ಕಾರದ ‘ರಿಟ್ ಅರ್ಜಿ’ಯಿಂದಾಗಿ ಈ ಒಂದು ದಿನದ ಸೌಲಭ್ಯವೂ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.


