January19, 2026
Monday, January 19, 2026
spot_img

ನೀರಿನ ಹೊಂಡಕ್ಕೆ ಬಿದ್ದು ಟೆಕ್ಕಿ ಸಾವು: ಎಸ್​ಐಟಿ ತನಿಖೆಗೆ ಆದೇಶಿಸಿದ ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೊಯ್ಡಾ ಟೆಕ್ಕಿಯ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.

ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಈ ವಿಷಯದ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಮೀರತ್ ವಿಭಾಗೀಯ ಆಯುಕ್ತರು ಈ SIT ನೇತೃತ್ವ ವಹಿಸಲಿದ್ದಾರೆ. ಮೀರತ್ ವಲಯದ ಹೆಚ್ಚುವರಿ ಮಹಾನಿರ್ದೇಶಕರು (ADG) ಮತ್ತು ಲೋಕೋಪಯೋಗಿ ಇಲಾಖೆಯ (PWD) ಮುಖ್ಯ ಎಂಜಿನಿಯರ್ ಕೂಡ ಈ ತಂಡದಲ್ಲಿರಲಿದ್ದಾರೆ.

5 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಂಡಕ್ಕೆ ಸೂಚಿಸಲಾಗಿದೆ. ಇದಲ್ಲದೆ, ಐಎಎಸ್ ಅಧಿಕಾರಿ ಲೋಕೇಶ್ ಎಂ ಅವರನ್ನು ನೊಯ್ಡಾ ಪ್ರಾಧಿಕಾರದ ಸಿಇಒ ಸ್ಥಾನದಿಂದ ವಜಾಗೊಳಿಸಲಾಗಿದೆ.

ಗ್ರೇಟರ್ ನೊಯ್ಡಾದಲ್ಲಿ ನೀರು ತುಂಬಿದ ಗುಂಡಿಗೆ ಕಾರು ಬಿದ್ದು 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನೊಳಗೆ ಸಿಲುಕಿದ್ದ ಅವರು ತನ್ನ ಪ್ರಾಣ ಉಳಿಸಿಕೊಳ್ಳಲು ಕಾರಿನ ಬಾಗಿಲು ತೆರೆದು ಕಾರಿನ ಮೇಲೆ ಕುಳಿತಿದ್ದರು. ಮೊಬೈಲ್ ಟಾರ್ಚ್ ಬೀಸುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದರು. ಕೊನೆಗೆ ತನ್ನ ತಂದೆಗೆ ಫೋನ್ ಮಾಡಿ ತಾನು ಬಿದ್ದಿರುವ ವಿಷಯ ತಿಳಿಸಿದ್ದರು. ಆದರೆ, ಮೈ ಕೊರೆಯುತ್ತಿದ್ದ ನೀರಿನಲ್ಲಿ ಕಾರು ಮುಳುಗಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.

ಪೊಲೀಸರು ಹಲವಾರು ಗಂಟೆಗಳ ಕಾಲ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಅವರ ದೇಹವನ್ನು ಹೊರಗೆ ತೆಗೆಯಲಾಯಿತು. ಈ ವೇಳೆ ಡೆಲಿವರಿ ಬಾಯ್ ಒಬ್ಬರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅವರನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣ ಅವರು ತಮ್ಮ ತಂದೆಗೆ ಫೋನ್ ಮಾಡಿ ತಾನು ನೀರಿನ ಗುಂಡಿಗೆ ಬಿದ್ದಿದ್ದೇನೆಂದು ತಿಳಿಸಿ ಹೇಗಾದರೂ ನನ್ನನ್ನು ಬದುಕಿಸಿ ಎಂದು ಗೋಗರೆದಿದ್ದರು. ಅವರು ಮನೆಯಿಂದ ಆ ಸ್ಥಳಕ್ಕೆ ಬರುವಷ್ಟರಲ್ಲಿ ಅವರ ಮಗ ಪ್ರಾಣ ಬಿಟ್ಟಾಗಿತ್ತು.

27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ತಮ್ಮ ಮನೆಯಿಂದ ಕೆಲವೇ ನಿಮಿಷಗಳ ದೂರದಲ್ಲಿದ್ದಾಗ ಈ ದುರಂತ ಸಂಭವಿಸಿತ್ತು. ಅವರ ಎಸ್‌ಯುವಿ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು, ಕಟ್ಟಡ ನಿರ್ಮಾಣಕ್ಕೆ ಅಗೆದ ಆಳವಾದ, ನೀರಿನಿಂದ ತುಂಬಿದ ಗುಂಡಿಗೆ ಬಿದ್ದಿತು. ದಟ್ಟವಾದ ಮಂಜು ಕವಿದಿದ್ದರಿಂದ ಅವರಿಗೆ ರಸ್ತೆ ಸರಿಯಾಗಿ ಕಾಣದೆ ಈ ದುರಂತ ಸಂಭವಿಸಿತ್ತು.

Must Read