ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಡೋದರಾದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಏಕಪಕ್ಷೀಯ ಪ್ರದರ್ಶನ ನೀಡಿದ್ದು, 61 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಸತತ ಯಶಸ್ಸು ಮುಂದುವರಿಸಿಕೊಂಡ ಆರ್‌ಸಿಬಿ, ಟೂರ್ನಿಯಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿಯೂ ಹೊರಹೊಮ್ಮಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಆರಂಭದಲ್ಲಿ ಆಘಾತ ಎದುರಾಯಿತು. ಗ್ರೇಸ್ ಹ್ಯಾರಿಸ್ ಮತ್ತು ಜಾರ್ಜಿಯಾ ವೋಲ್ ಕಡಿಮೆ ಮೊತ್ತಕ್ಕೆ ಔಟ್ ಆಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ನಂತರ ಸ್ಮೃತಿ ಮಂಧಾನಾ ಮತ್ತು ಗೌತಮಿ ನಾಯಕ್ ಜವಾಬ್ದಾರಿಯುತ ಆಟವಾಡಿ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಿದರು. ಸ್ಮೃತಿ 26 ರನ್‌ಗಳಿಗೆ ನಿರ್ಗಮಿಸಿದರೂ, ಗೌತಮಿ ನಾಯಕ್ ಮತ್ತು ರಿಚಾ ಘೋಷ್ ಜೋಡಿ ರನ್‌ಗತಿಗೆ ವೇಗ ನೀಡಿತು. ಗೌತಮಿ ನಾಯಕ್ 73 ರನ್‌ಗಳ ಆಕರ್ಷಕ ಇನ್ನಿಂಗ್ಸ್ ಆಡುತ್ತಾ ಡಬ್ಲ್ಯುಪಿಎಲ್‌ನಲ್ಲಿ ಅರ್ಧಶತಕ ಬಾರಿಸಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ್ತಿಯಾಗಿ ದಾಖಲೆ ನಿರ್ಮಿಸಿದರು. ಆರ್‌ಸಿಬಿ 20 ಓವರ್‌ಗಳಲ್ಲಿ 178 ರನ್ ಗಳಿಸಿತು.
ಲಕ್ಷ್ಯ ಬೆನ್ನಟ್ಟಿದ ಗುಜರಾತ್ ತಂಡ ಆರಂಭದಲ್ಲೇ ಕುಸಿತ ಕಂಡಿತು. ಬೆತ್ ಮೂನಿ ಮತ್ತು ಸೋಫಿ ಡಿವೈನ್ ಬೇಗನೇ ಔಟ್ ಆದರು. ನಾಯಕಿ ಆಶ್ಲೀ ಗಾರ್ಡ್ನರ್ 54 ರನ್‌ಗಳ ಹೋರಾಟ ನಡೆಸಿದರೂ, ಉಳಿದವರಿಂದ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಗುಜರಾತ್ 117 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಪರ ಸಯಾಲಿ ಸತ್ಘರೆ ಮೂರು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


