ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಖಚಿತಪಡಿಸಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ಪ್ರಕರಣ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು, ಸರ್ಕಾರಿ ಸೇವೆಯಲ್ಲಿರುವಾಗ ಈ ರೀತಿ ವರ್ತನೆ ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಇಲಾಖೆಯಿಂದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರು ಎಂದು ಕಂಡುಬಂದರೆ ಖಂಡಿತಾ ಮುಂದೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು, ಅವರನ್ನು ಹುದ್ದೆಯಿಂದಯೇ ಶಾಶ್ವತವಾಗಿ ತೆಗೆದುಹಾಕಲೂಬಹುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.
ನಿನ್ನೆ ವಿಡಿಯೊ ವೈರಲ್ ಆದ ಬೆನ್ನಲ್ಲೇ ತಮ್ಮನ್ನು ಭೇಟಿ ಮಾಡಲು ರಾಮಚಂದ್ರ ರಾವ್ ಬಂದಿದ್ದರು ಎಂದು ಆಮೇಲೆ ಗೊತ್ತಾಯಿತು. ಆದರೆ ಇಂತಹ ಪರಿಸ್ಥಿತಿಯಲ್ಲಿ ನಾನು ಖಂಡಿತಾ ಅವರನ್ನು ಭೇಟಿ ಮಾಡುತ್ತಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿ ಇಂತಹ ನೀಚ ಕೆಲಸ ಮಾಡಿದ್ದರೆ ಅದನ್ನು ಖಂಡಿತಾ ಕ್ಷಮಿಸಲು ಸಾಧ್ಯವಿಲ್ಲ ಎಂದರು.
ಡಿಜಿಪಿ ರಾಮಚಂದ್ರ ರಾವ್ ಅವರು ಇದೇ ವರ್ಷ ಮೇ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗುವವರಿದ್ದರು. ನಿವೃತ್ತಿ ಅಂಚಿನಲ್ಲಿ ಅವರ ವಿಡಿಯೊ ಹೊರಬಿದ್ದಿದ್ದು, ಅವರಿಗೆ ಭಾರೀ ಸಂಕಷ್ಟ ಮತ್ತು ಮುಜುಗರ ಉಂಟಾಗಿದೆ.


