January20, 2026
Tuesday, January 20, 2026
spot_img

ತಮಿಳುನಾಡಿನಲ್ಲಿ ನದಿ ಉತ್ಸವದ ವೇಳೆ ಹೀಲಿಯಂ ಗ್ಯಾಸ್​ ಸಿಲಿಂಡರ್​ ಸ್ಪೋಟ: ನಾಲ್ವರ ದುರ್ಮರಣ

ಹೀಲಿಯಂ ಗ್ಯಾಸ್​ ಸಿಲಿಂಡರ್​ ಸ್ಪೋಟಗೊಂಡು ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಸೋಮವಾರ ನಡೆದಿದೆ.

ಮನಲೂರ್ಪೆಟ್ಟೈ ಎಂಬ ಪ್ರದೇಶದಲ್ಲಿ ನದಿ ಉತ್ಸವದ ವೇಳೆ ಬಲೂನುಗಳಿಗೆ ಗಾಳಿ ತುಂಬಲು ಬಳಸುವ ಹೀಲಿಯಂ ಗ್ಯಾಸ್​ ಸಿಲಿಂಡರ್​ ಸ್ಫೋಟವಾಗಿದೆ. ಸಂಜೆ 7 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ಸವದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಜನರು ಆಗಮಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದು, ಜನರು ಮನೆಗೆ ಮರಳುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಸ್ಫೋಟದ ತೀವ್ರತೆಗೆ ಸುತ್ತಮುತ್ತ ನಿಂತಿದ್ದ ಜನರಿಗೆ ಗ್ಯಾಸ್​​ ಸಿಲಿಂಡರ್​ನ ಭಾಗಗಳು ಬಡಿದಿವೆ. ಇದರಿಂದ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇದೀಗ, ಸಾವನ್ನಪ್ಪಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.

ಈ ಘಟನೆಗೆ ಆಘಾತ ವ್ಯಕ್ತಪಡಿಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಡಿ ಕೆ.ಪಳನಿಸ್ವಾಮಿ, ಹೀಲಿಯಂ ಗ್ಯಾಸ್​ ಸಿಲಿಂಡರ್​ ಸ್ಪೋಟದ ಸುದ್ದಿ ಕೇಳಿ ಆಘಾತವಾಯಿತು. ಸಾವನ್ನಪ್ಪಿದವರಿಗೆ ಸಂತಾಪಗಳು. ಅವರ ಕುಟುಂಬಸ್ಥರಿಗೆ ಊಗವಂತ ಧೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಗುಣಮುಖರಾಗುವಂತೆ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ನದಿ ಉತ್ಸವದ ವೇಳೆ ನಡೆದ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಮತ್ತು ಗಾಯಗೊಂಡವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ಅನ್ನು ಸರಿಯಾದ ಅನುಮತಿಯೊಂದಿಗೆ ಖರೀದಿಸಲಾಗಿದೆಯೇ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಅಥವಾ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿತೇ ಎಂದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Must Read