ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬಕ್ಕೆ ಅಮ್ಮ ಸೀರೆ ಕೊಡಿಸಿಲ್ಲವೆಂದು 14 ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಅಮ್ಮ ಸೀರೆ ಕೊಡಿಸಿಲ್ಲವೆಂದು ಈ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ತಂದೆ ಟೈಲರ್ ಆಗಿದ್ದು, ಅಜ್ಜ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಜ್ಜ-ಅಜ್ಜಿ ಊರಿಗೆ ಹೋಗಿರುವಾಗ ಆಕೆ ತನ್ನ ತಾಯಿಯ ಜತೆ ಏನಾದರೂ ಖರೀದಿ ಮಾಡಬೇಕು ಎಂದು ಹೋಗಿದ್ದಳು.
ಆಗ ತಾಯಿ ಬಳಿ ಸೀರೆ ಕೊಡಿಸು ಎಂದು ಕೇಳಿದ್ದಾಳೆ, ಆಗ ನೀನಿನ್ನು ಚಿಕ್ಕವಳು ಅದನ್ನು ಬಿಟ್ಟು ಬೇರೇನಾದರೂ ಕೇಳು ಕೊಡಿಸುತ್ತೇನೆ ಎಂದು ಶಾಂತವಾಗಿಯೇ ಹೇಳಿದ್ದರು. ಆದರೆ ಆಕೆ ತುಂಬಾ ಹಠ ಮಾಡಿದ್ದಳು. ಮನೆಗೆ ಬಂದು ಅಮ್ಮ ಎಷ್ಟೇ ಸಮಾಧಾನ ಪಡಿಸಿದರೂ ಸಮಾಧಾನವಾಗಲೇ ಇಲ್ಲ. ಅಸಮಾಧಾನದಿಂದ ತನ್ನ ಅಜ್ಜನ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳು ಎಲ್ಲೂ ಕಾಣದಿದ್ದಾಗ ತನ್ನ ಹಿರಿಯ ಮಗಳ ಬಳಿ ಆಕೆಗೆ ಕರೆ ಮಾಡಲು ಕೇಳಿದ್ದಾರೆ, ಆದರೂ ಆಕೆ ಕರೆ ರಿಸೀವ್ ಮಾಡಿರಲಿಲ್ಲ. ಕೊನೆಗೆ ಇಡೀ ಮನೆಯಲ್ಲಾ ಹುಡುಕಿದ್ದಾರೆ. ಆಗ ಅಜ್ಜನ ಕೋಣೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಶವವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.


