ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಚಟ ಮತ್ತು ಸತ್ಯವಿಲ್ಲದೇ ಯಾರನ್ನಾದರೂ ದೂಷಿಸುವ ಪ್ರವೃತ್ತಿಯು ವ್ಯಕ್ತಿಯೊಬ್ಬನ ಬಲಿ ತೆಗೆದುಕೊಂಡಿದೆ .
ಅಂತಯೇ ಕೇರಳದ ಕೋಳಿಕ್ಕೋಡ್ ಜಿಲ್ಲೆಯ ವ್ಯಕ್ತಿಗೆ ಮಹಿಳೆಯೊಬ್ಬರು, ಬಸ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಮಾಡಿದ್ದ ವಿಡಿಯೋ ವೈರಲ್ ಆಗಿದ್ದು, ಇದರಿಂದ ಮುಜುಗರಕ್ಕೊಳಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇರಳದ ಕೋಳಿಕ್ಕೋಡ್ ಜಿಲ್ಲೆಯ ಗೋವಿಂದಪುರಂ ನಿವಾಸಿಯಾಗಿದ್ದ 42 ವರ್ಷದ ಯು.ದೀಪಕ್ ಎಂಬ ವ್ಯಕ್ತಿ ಜ.16ರಂದು ಕಣ್ಣೂರು ಜಿಲ್ಲೆಯ ಪಯ್ಯನ್ನೂರು ರೈಲ್ವೆ ನಿಲ್ದಾಣದಿಂದ ಫುಲ್ ರಶ್ ಇದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅದೇ ಬಸ್‌ನಲ್ಲಿದ್ದ ಶಿಂಜಿತಾ ಎಂಬ ಮಹಿಳೆಯೊಬ್ಬರು ದೀಪಕ್ ಆಕೆಯನ್ನು ಅನುಚಿತವಾಗಿ ಮುಟ್ಟಿ ಲೈಂಗಿಕ ಕಿರುಕುಳ ಮಾಡಿದ್ದು ಎಂದು ಆರೋಪಿಸಿ ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಪ್ಲೋಡ್ ಮಾಡಿದ್ದಾರೆ.
ಇನ್ನು, ಈ ದೀಪಕ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಜೀವನ ಪೂರ್ತಿ ಯಾವುದೇ ವಿವಾದಗಳಿಲ್ಲದೆ ಜೀವನ ನಡೆಸಿದ್ದಾರೆ. ಆದರೆ ಈ ವೈರಲ್ ವಿಡಿಯೋದಿಂದ ದೀಪಕ್ ತೀವ್ರ ಸೈಬರ್ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ದೀಪಕ್ ಮನನೊಂದು ನೇಣಿಗೆ ಕೊರಳೊಡಿದ್ದಾರೆ.
ಶಿಂಜಿತಾ ಅವರು ಆನ್‌ಲೈನ್ ಪ್ರಚಾರಕ್ಕಾಗಿ ಈ ವಿಡಿಯೋ ಮಾಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. “ಅವಳು ರೀಲ್ ಮತ್ತು ಪಬ್ಲಿಸಿಟಿಗಾಗಿ ನಮ್ಮ ಮಗನ ಜೀವನವನ್ನು ಹಾಳುಮಾಡಿದಳು. ಸಾಮಾಜಿಕ ಮಾಧ್ಯಮಗಳು ನಿಶಬ್ದವಾಗಿ ಜೀವಗಳನ್ನು ಕಸಿದುಕೊಳ್ಳುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆ ವಿರುದ್ಧ ಕೇಸ್
ಇತ್ತ ತನ್ನ ಕಂಟೆಂಟ್ ಗಾಗಿ ಬಸ್ ಪ್ರಯಾಣದ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದ ಮಹಿಳೆಗೆ ಕೇರಳ ಪೊಲೀಸರು ಶಾಕ್ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ವಡಕರದ ನಿವಾಸಿ ಶಿಮ್ಜಿತಾ ಮುಸ್ತಫಾ (35) ವಿರುದ್ಧ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ, ಆತ್ಮಹತ್ಯೆಗೆ ಪ್ರಚೋದನೆಗಾಗಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108ರ ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ಆದೇಶ, ವರದಿ ಸಲ್ಲಿಕೆಗೆ ವಾರ ಗಡುವು
ಅಂತೆಯೇ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿದೆ ಮತ್ತು ಉತ್ತರ ವಲಯದ ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ಅವರಿಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಫೆಬ್ರವರಿ 19 ರಂದು ಜಿಲ್ಲೆಯಲ್ಲಿ ನಡೆಯಲಿರುವ ಆಯೋಗದ ಸಭೆಯಲ್ಲಿ ಈ ಪ್ರಕರಣವನ್ನು ಪರಿಗಣಿಸಲಾಗುವುದು.
ಏತನ್ಮಧ್ಯೆ, ಬಿಜೆಪಿ ನಾಯಕ ಪಿ ಎಸ್ ಶ್ರೀಧರನ್ ಪಿಳ್ಳೈ ಅವರು ದುಃಖಿತ ಕುಟುಂಬವನ್ನು ಭೇಟಿ ಮಾಡಿ ಸರಿಯಾದ ತನಿಖೆಯನ್ನು ಪ್ರಾರಂಭಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ವಿಡಿಯೋ ರೆಕಾರ್ಡ್ ಮಾಡಿದ ಮಹಿಳೆ ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತೆ ಮತ್ತು ಚುನಾಯಿತ ಪ್ರತಿನಿಧಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಆರ್ಥಿಕ ಲಾಭ ಮಾಡಿಕೊಳ್ಳಲು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಕೇರಳದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿವೆ ಎಂದು ಅವರು ಆರೋಪಿಸಿದರು.


